ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಗ್ರಾ.ಜಿಲ್ಲಾ ಘಟಕ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ವತಿಯಿಂದ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ-2026, ಆಗಸ್ಟ್ 2 ರಂದು ಮಧ್ಯಾಹ್ನ 11 ಗಂಟೆಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಅಧ್ಯಕ್ಷ ಎಲ್.ಎನ್.ಶ್ರೀನಾಥ್ ತಿಳಿಸಿದ್ದಾರೆ.
ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೇಕಾರ ಉದ್ಯಮದ ತವರೂರು ದೊಡ್ಡಬಳ್ಳಾಪುರದ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಕಲೆಯಾದ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ, ದೊಡ್ಡಬಳ್ಳಾಮರ ಗಾಳಿಪಟ ಕಲಾಸಂಘವು ಕಳೆದ 19 ವರ್ಷಗಳಿಂದ ದೊಡ್ಡಬಳ್ಳಾಪುರದಲ್ಲಿ ಗಾಳಿಪಟ ಉತ್ಸವ ಹಾಗೂ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ನಮ್ಮೊಂದಿಗೆ ಜನಪದ ತಜ್ಞ ಎಚ್.ಎಲ್. ನಾಗೇಗೌಡರವರ ಆಸಕ್ತಿ ಮತ್ತು ಪರಿಶ್ರಮದಿಂದ ಸ್ಥಾಪನೆಯಾದ ಯುನೆಸ್ಕೋ ಮಾನ್ಯತೆ ಪಡೆದಿರುವ ಕರ್ನಾಟಕ ಜಾನಪದ ಪರಿಷತ್ತು ತನ್ನ 36ನೇ ವಾರ್ಷಿಕೋತ್ಸವದ ಅಂಗವಾಗಿ ಜೊತೆಗೂಡಿ, ಈ ಸ್ಪರ್ಧೆಗಳು ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಆಗಸ್ಟ್ 2 ರಂದು ಮಧ್ಯಾಹ್ನ 11 ಗಂಟೆಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ರಾಜ್ಯದ ವಿವಿದೆಡೆಗಳಿಂದ ಶಾಲಾ ಮಕ್ಕಳು ಭಾಗವಹಿಸಲಿದ್ದಾರೆ. ಬಾಲಕರು ಹಾಗೂ ಬಾಲಕಿಯರು ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಶಾಲಾ ಗುರುತಿನ ಚೀಟಿ ಅಥವಾ ಸಮವಸ್ತ್ರದೊಂದಿಗೆ ಹಾಜರಾಗಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಿದೆ ಎಂದರು.
ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಕಾರ್ಯದರ್ಶಿ ಎ.ಎನ್.ಪ್ರಕಾಶ್ ಮಾತನಾಡಿ, ಗಾಳಿಪಟ ಸ್ಪರ್ಧೆಗಳನ್ನು ಶಾಸಕ ಧೀರಜ್ ಮುನಿರಾಜ್ ಉದ್ಘಾಟಿಸಲಿದ್ದಾರೆ. ಗಾಳಿಪಟ ಕಲಾ ಸಂಘದ ಅಧ್ಯಕ್ಷ ಎಲ್.ಎನ್. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎ.ಎನ್. ಪ್ರಕಾಶ (ಗಾಳಿಪಟ) ಭಾಗವಹಿಸಲಿದ್ದಾರೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪ್ರಭಾ ನಾಗರಾಜ್, ಉಪಾಧ್ಯಕ್ಷ ವೆಂಕಟೇಶ್.ಆರ್(ಬಂತಿ) ಸೇರಿದಂತೆ ನಗರಸಭಾ ಸದಸ್ಯರು, ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಉಪಾಧ್ಯಕ್ಷ ಎಸ್.ಮುನಿರಾಜು, ಖಜಾಂಚಿ ವಿಶ್ವನಾಥ್, ಸಹ ಕಾರ್ಯದರ್ಶಿ ಜೆ.ವಿ.ಸುಬ್ರಹ್ಮಣ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.



