ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಕ್ಷತೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಗೆ ನಿವೃತ್ತ ಪ್ರಾಂಶುಪಾಲ ಡಾ. ಡಿ. ಧರಣೇಂದ್ರಯ್ಯ ಅವರು ಅತ್ಯುತ್ತಮ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಅಭಿಪ್ರಾಯಪಟ್ಟರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಾಂಶುಪಾಲ ಡಾ. ಡಿ. ಧರಣೇಂದ್ರಯ್ಯ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯ ಸೇವೆ:
"ಧರಣೇಂದ್ರಯ್ಯನವರು ಕೇವಲ ಬೋಧನೆಗೆಷ್ಟೇ ಸೀಮಿತವಾಗದೆ ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ಸಾಂಸ್ಕೃತಿಕ ಸಮಿತಿಗಳ ಮೂಲಕ ಹತ್ತಾರು ಉಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸಿ ಜನಮನ್ನಣೆ ಗಳಿಸಿದ್ದಾರೆ. ನಾನು ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿದ್ದಾಗ 'ಧೂಳು ನಗರ'ವೆಂಬ ಹೆಸರು ಪಡೆದಿದ್ದ ಚಿತ್ರದುರ್ಗವನ್ನು ಸ್ವಚ್ಛಗೊಳಿಸಲು 'ಪರಿಸರ ಪಯಣ' ಮತ್ತು ಪರಿಸರ ದಿನಾಚರಣೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಜಿಲ್ಲೆಯ 19 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ, ಲಕ್ಷಾಂತರ ಗಿಡಗಳನ್ನು ನೆಡಲು ಧರಣೇಂದ್ರಯ್ಯನವರು ಅಭೂತಪೂರ್ವ ಸಹಕಾರ ನೀಡಿದ್ದರು" ಎಂದು ಸ್ಮರಿಸಿದರು.
ಅಲ್ಲದೆ, ಕಡೆಹೊಡೆವು ಹಾಗೂ ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದ ನೊಳಂಬರ ಕಾಲದ ಆಂಜನೇಯ ಸ್ವಾಮಿ ದೇವಾಲಯಗಳ ಸ್ವಚ್ಛತೆ, ವಾಣಿ ಕಾಲೇಜು ಆವರಣದಲ್ಲಿ ಹೊಂಗೆ ಹಾಗೂ ಶ್ರೀಗಂಧದ ಗಿಡಗಳನ್ನು ನೆಟ್ಟಿದ್ದು, ಐಮಂಗಳ ಹೋಬಳಿಯ ಅರಳಿಕಟ್ಟಿ ಗ್ರಾಮದಲ್ಲಿ ಎನ್.ಎಸ್.ಎಸ್ ವತಿಯಿಂದ ನೆಟ್ಟ ಗಿಡಗಳು ಇಂದು ಹೆಮ್ಮರಗಳಾಗಿ ಬೆಳೆದು ನಿಂತಿರುವುದಕ್ಕೆ ಧರಣೇಂದ್ರಯ್ಯನವರ ಶ್ರಮವೇ ಕಾರಣ ಎಂದರು.
ಉದ್ಯೋಗಮುಖಿ ಕೋರ್ಸ್‌ಗಳಿಗೆ ಒತ್ತು ನೀಡಲಿ:
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ. ಚಿದಾನಂದ ಗೌಡ, "ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದಾಗಿ ಸಾಹಿತ್ಯ ಹಾಗೂ ಕಲೆ ಓದುವ ಪದವೀಧರರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನತೆ ಆಧುನಿಕ ಕೋರ್ಸ್‌ಗಳತ್ತ ಒಲವು ತೋರುತ್ತಿರುವುದರಿಂದ, ಪದವಿ ಕಾಲೇಜುಗಳಲ್ಲಿ ಉದ್ಯೋಗಮುಖಿ ಕೋರ್ಸ್‌ಗಳನ್ನು ಹೆಚ್ಚಾಗಿ ಆರಂಭಿಸುವ ಅಗತ್ಯವಿದೆ" ಎಂದು ಹೇಳಿದರು.
ಸಮಾರಂಭದಲ್ಲಿ ದಕ್ಷಿಣ ಪ್ರಾಂತೀಯ ಆರ್.ಎಸ್.ಎಸ್. ಸಂಚಾಲಕ ನಾ. ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ರಘುನಾಥ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ. ಯಶೋಧರ, ಕುವೆಂಪು ವಿ.ವಿ. ನಿವೃತ್ತ ಕುಲಸಚಿವ ಎ. ರಾಮೇಗೌಡ, ನಿವೃತ್ತ ಜಂಟಿ ನಿರ್ದೇಶಕ ಟಿ.ವಿ. ಸುರೇಶ್ ಗುಪ್ತ, ನಿವೃತ್ತ ಪ್ರಾಂಶುಪಾಲ ಡಾ. ಸಿ. ಶಿವಲಿಂಗಪ್ಪ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ತಿಪ್ಪೇಸ್ವಾಮಿ, ಧರಣೇಂದ್ರಯ್ಯ ಅವರ ಪತ್ನಿ ಕವಿತಾ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಲೂರು ಹನುಮಂತರಾಯಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಲ್. ಗಿರಿಧರ ಸೇರಿದಂತೆ ಹಲವು ಮುಖಂಡರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



