ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ಕಂಠೀರವ ಸ್ಟುಡಿಯೋ ಸಮೀಪದ ಡಾ. ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಅಂಡರ್ ಪಾಸ್ ಕಾಮಗಾರಿ ವೇಳೆ ಭಾರಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ದುರಂತ ಅಂತ್ಯ ಕಂಡಿದ್ದು, ಮೂವರು ತೀವ್ರವಾಗಿ ಗಾಯಗೊಂಡಿರುವ ದೌರ್ಭಾಗ್ಯಕರ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಡೆಯುತ್ತಿದ್ದ ಈ ಕಾಮಗಾರಿಯಲ್ಲಿ, ಸುಮಾರು 20 ಅಡಿ ಆಳದ ಗುಂಡಿಯಲ್ಲಿ ಇಳಿದು ನೀರನ್ನು ಮೋಟಾರ್ ಮೂಲಕ ಪಂಪ್ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಬದಿಯ ಮಣ್ಣಿನ ತಡೆಗೋಡೆ (ಮಡ್ ವಾಲ್) ಕುಸಿದು ಬಿದ್ದಿದೆ.
ಅಪಾಯ ತಕ್ಷಣವೇ ಅರಿವಿಗೆ ಬಂದಿದ್ದರಿಂದ ಮೂವರು ಕಾರ್ಮಿಕರು ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಒಡಿಶಾ ಮೂಲದ ಸೋನಾರಾಮ್ (26) ಹಾಗೂ ಜಾರ್ಖಂಡ್ ಮೂಲದ ಪರಿಮಳ್ (31) ಮಣ್ಣಿನಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಸದಾನಂದ್, ಸುನೀಲ್ ಹಾಗೂ ಇರ್ಮಿಯಾಜ್ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳು ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ನಂದಿನಿ ಲೇಔಟ್ ಪೊಲೀಸರು, ಅಗ್ನಿಶಾಮಕ ಪಡೆ ಹಾಗೂ ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಇಲ್ಲವೇ ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



