ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೋಕಾಯುಕ್ತ ಅಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಕರ್ತವ್ಯಲೋಪ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದ ತಂಡ ಬೆಂಗಳೂರಿನ ಅಶೋಕ್ ನಗರದಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಲೋಕಾಯುಕ್ತರ ಪ್ರಶ್ನೆಗಳಿಗೆ ತಬ್ಬಿಬ್ಬು:
ವಾಯುಮಾಲಿನ್ಯ, ಜಲಮಾಲಿನ್ಯದ ಪ್ರಮಾಣ ಏರಿಕೆ ಆಗುತ್ತಿದೆ. ನೀವು ಈ ವಿಚಾರಗಳ ಬಗ್ಗೆ ಜಾಗ್ರತೆಯಿಂದ ಕೆಲಸ ಮಾಡಬೇಕಿದೆ ಎಂದು ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ಮಾಲಿನ್ಯಕ್ಕೆ ಕಾರಣರಾಗುವ ಕೆಲವರಿಗೆ ದಂಡ ವಿಧಿಸಿಸುತ್ತೀರಿ. ಅಷ್ಟೋ ಇಷ್ಟೋ ದಂಡ ಪಾವತಿಸಿದ ಬಳಿಕವೂ ಅದೇ ನಿಯಮ ಉಲ್ಲಂಘನೆಯಾಗುತ್ತಿವೆ. ನೀವು ಅಂಥವರ ಪರವಾನಗಿ ರದ್ದು ಮಾಡಬೇಕು. ಎಷ್ಟು ಕ್ರಮ ಕೈಗೊಂಡಿದ್ದೀರಿ..? ಎಷ್ಟು ಕ್ಲೋಸರ್ ಆರ್ಡರ್ ಮಾಡಿದ್ದೀರಿ..? ನಿಯಮ ಉಲ್ಲಂಘನೆಯಾದ ಎಷ್ಟು ಸ್ಥಳಗಳಲ್ಲಿ ಪರಿಶೀಲನೆ ಮಾಡಿದ್ದೀರಿ ಎಂದು ಲೋಕಾಯುಕ್ತರು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡುತ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾದರು.
ನೀವು ಏನು ಮಾಡುತ್ತಿದ್ದೀರಿ, ಯಾರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂಬುದು ಕಾಣಿಸುತ್ತಿಲ್ಲ. ಸೂಕ್ತ ರೀತಿಯಲ್ಲಿ ಕೆಲಸ ಮಾಡದಿರುವುದೆಂದರೆ ಅಪರಾಧ ಮಾಡಿದಂತೆಯೇ" ಎಂದು ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಖಡಕ್ ಎಚ್ಚರಿಕೆ ನೀಡಿದ ಘಟನೆಯು ಜರುಗಿತು.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ತಂಡ ಬಸವೇಶ್ವರ ನಗರಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಅಲ್ಲಿನ 13 ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಹಾಗೂ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ಮತ್ತೊಂದು ತಂಡವು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಮಂಡಳಿಯ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದೆ.
ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಜೂ.24ರ ಮಂಗಳವಾರ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಸರ್ಕಾರಿ ಅಧಿಕಾರಿಗಳ ಮನೆ-ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಧಾರವಾಡ, ಹಾಸನ, ಗದಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 45 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು.
ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಜಮೀನು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 34.90 ಕೋಟಿ ಲಕ್ಷ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು. ದಾಳಿಗೊಳಗಾದ ಎಂಟು ಮಂದಿ ವಿರುದ್ಧ ಆಯಾ ಜಿಲ್ಲಾ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಕಚೇರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


