ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು. ನಂತರ ಮುಖ್ಯಶಿಕ್ಷಕ ಟಿ.ಪಿ. ಉಮೇಶ್ ಅವರು ಕುಕೃತ್ಯಗಳ ನಡೆಸುತ್ತ ಬದುಕಿದ ವ್ಯಕ್ತಿಯೊಬ್ಬರು ಆತ್ಮಪರಿವರ್ತನೆ, ತಪಸ್ಸು ಮತ್ತು ಜ್ಞಾನಸಾಧನೆಯ ಮೂಲಕ ಮಹರ್ಷಿಯಾಗಿ, ಆದಿಕವಿಯಾಗಿ ಜಗತ್ತಿನ ಗೌರವಕ್ಕೆ ಪಾತ್ರರಾದದ್ದು ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿದೆ. ಮನುಷ್ಯನ ಹಿಂದಿನ ಬದುಕು ಹೇಗಿದ್ದರೂ, ತನ್ನ ತಪ್ಪುಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆದರೆ ಉನ್ನತ ಸಾಧನೆ ಮಾಡಬಹುದು ಎಂಬುದನ್ನು ವಾಲ್ಮೀಕಿ ಮಹರ್ಷಿಗಳ ಜೀವನ ನಮಗೆ ಕಲಿಸುತ್ತದೆ ಎಂದು ಹೇಳಿದರು.
ರಾಮಾಯಣ ಕೇವಲ ಮಹಾಕಾವ್ಯವಲ್ಲ; ಅದು ಧರ್ಮ, ಸತ್ಯ, ತ್ಯಾಗ, ಸಹನೆ, ಕರ್ತವ್ಯಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಜೀವನದರ್ಶನವಾಗಿದೆ. ಶ್ರೀರಾಮನ ಆದರ್ಶಗಳು, ಸೀತೆಯ ಸಹನೆ ಹಾಗೂ ಲವಕುಶರ ವ್ಯಕ್ತಿತ್ವದ ಮೂಲಕ ಮಹರ್ಷಿ ವಾಲ್ಮೀಕಿ ಅವರು ಸಮಾಜಕ್ಕೆ ಅಮೂಲ್ಯ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳು ಅವರ ಜೀವನದಿಂದ ಸ್ಫೂರ್ತಿ ಪಡೆದು ಸತ್ಯ, ಪ್ರಾಮಾಣಿಕತೆ, ಶಿಸ್ತು ಮತ್ತು ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಮಹರ್ಷಿ ವಾಲ್ಮೀಕಿ ಅವರ ಜೀವನ ಸಾಧನೆ ಮತ್ತು ರಾಮಾಯಣ ಮಹಾಕಾವ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಜಿ.ಎನ್.ರೇಷ್ಮಾ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.



