ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಎಲ್ಲರಿಂದಲೂ ಬರೆಸಿಕೊಳ್ಳುವ, ಬರೆಸುವ, ಬೆಳೆಸುವ ಗುಣ ಚಿತ್ರದುರ್ಗದ ಮಣ್ಣಿಗಿದೆ ಎಂದು ಖ್ಯಾತ ಸಾಹಿತಿ, ಕಾದಂಬರಿಕಾರ ಡಾ.ಬಿ.ಎಲ್.ವೇಣು ಹೇಳಿದರು.
ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ, ರೇಣುಕಾ ಪ್ರಕಾಶನ ಇವುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‌ನಲ್ಲಿ ಇತಿಹಾಸ ವಿದ್ವಾಂಸರು ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ.ಲಕ್ಷ್ಮಣ್ ತೆಲಗಾವಿರವರಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಚಿದಾನಂದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಶೋಧನೆ, ಸಾಹಿತ್ಯ ಚಳುವಳಿಯಲ್ಲಿ ತೊಡಗಿಸಿಕೊಂಡ ಮೇರು ಪರ್ವತ ಚಿದಾನಂದಮೂರ್ತಿ ಹೆಸರಿನಲ್ಲಿ ಪ್ರಶಸ್ತಿ ದೊರಕಿರುವುದು ಡಾ.ಲಕ್ಷ್ಮಣ ತೆಲಗಾವಿರವರ ಪುಣ್ಯ.
ಹುಲ್ಲೂರು ಶ್ರೀನಿವಾಸ ಜೋಯಿಸರ ಲೇಖನಗಳಿಗೆ ಮೆರಗು ತಂದವರು ಲಕ್ಷ್ಮಣ ತೆಲಗಾವಿ. ನಾನು ಐತಿಹಾಸಿಕ ಕಾದಂಬರಿಗಳನ್ನು ಬರೆದು ಹೆಸರು ಮಾಡಿದ್ದೇನೆಂದರೆ ಅದರ ಹಿಂದ ಲಕ್ಷ್ಮಣ ತೆಲಗಾವಿರವರಿದ್ದಾರೆಂದು ನೆನಪಿಸಿಕೊಂಡರು.
ಡಾ.ಲಕ್ಷ್ಮಣ್‌ತೆಲಗಾವಿರವರಿಗೆ ಪ್ರಶಸ್ತಿಗಳು ಹೊಸದೇನಲ್ಲ. ಗಳಗನಾಥ ಪ್ರಶಸ್ತಿ, ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ. ಇದು ಅವರ ಸಾಧನೆಗೆ ಸಿಕ್ಕ ಪುರಸ್ಕಾರ. ಪ್ರಶಸ್ತಿಗಳು ಬರವಣಿಗೆಗೆ ಶಕ್ತಿ ಕೊಡುತ್ತದೆ. ಸಂಶೋಧನೆ, ಸಾಹಿತ್ಯ ಚಳುವಳಿಯಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದ ಚಿದಾನಂದಮೂರ್ತಿರವರು ವಿರಾಟ ರೂಪಿ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಡಿದವರು. ಸಾಲು ಸಾಲು ಕಾದಂಬರಿಗಳನ್ನು ಬರೆದು ಸಿನಿಮಾಗಳ ಪ್ರಶಸ್ತಿ ನನಗೆ ಬಂದಿದೆಯೆಂದರೆ ಅದಕ್ಕೆ ಮೂಲ ಕಾರಣ ಡಾ.ಲಕ್ಷ್ಮಣ್ ತೆಲಗಾವಿ ಎನ್ನುವುದನ್ನು ಮರೆಯುವಂತಿಲ್ಲ ಎಂದರು.
ಚಿದಾನಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಲಕ್ಷ್ಮಣ್‌ತೆಲಗಾವಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾದಾರ್ಪಣೆ ಮಾಡಿದ ಚಿದಾನಂದಮೂರ್ತಿರವರಲ್ಲಿ ಗಟ್ಟಿತನವಿತ್ತು. ಅವರು ಬೀದಿಗಿಳಿದು ಹೋರಾಟ ಮಾಡಿದ್ದನ್ನು ಅನೇಕ ವಿದ್ವಾಂಸರು ಒಪ್ಪಲಿಲ್ಲ. ಕನ್ನಡ ಪ್ರೀತಿ ರಕ್ತಗತವಾಗಿತ್ತು. ಗಟ್ಟಿ ಸಂಶೋಧನೆಗಳು ಈಗ ನಡೆಯುತ್ತಿಲ್ಲ. ವ್ಯಾಖ್ಯಾನ ಇತಿಹಾಸದ ಜೀವಾಳ. ಕಾವ್ಯಗಳ ಮೂಲಕ ಹೊಸ ಇತಿಹಾಸವನ್ನು ಬರೆಯುವ ಪ್ರಯತ್ನವಾಗಬೇಕಿದೆ ಎಂದು ನುಡಿದರು.
ನನಗೆ ಸಿಕ್ಕಿರುವ ಚಿದಾನಂದ ಪ್ರಶಸ್ತಿ ಚಿತ್ರದುರ್ಗಕ್ಕೆ ಸೇರಬೇಕು. ನನ್ನ ಜೊತೆ ಸಂಶೋಧನಾ ತಂಡದವರು ಚಿತ್ರದುರ್ಗದಲ್ಲಿದ್ದಾರೆ. ಆತ್ಮಶಾಂತಿಗಾಗಿ ಕೊನೆಯುಸಿರಿರುವವರೆಗೂ ಚಿತ್ರದುರ್ಗದ ಕೆಲಸ ಮಾಡುತ್ತೇನೆ. ಆಸಕ್ತರ ಮನೆ ಮನೆಗೆ ಪುಸ್ತಕಗಳನ್ನು ತಲುಪಿಸುತ್ತೇನೆ. ಜನ ಓದಿ ಇತಿಹಾಸ ತಿಳಿದುಕೊಳ್ಳಬೇಕೆಂಬುದು ನನ್ನ ಆಸೆ. ಐವತ್ತು ನಿಘಂಟು ಸಮಿತಿ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಮೊಟ್ಟ ಮೊದಲು ಪ್ರವೇಶಿಸಿದ ಚಿದಾನಂದಮೂರ್ತಿರವರ ಕನ್ನಡ, ಶಾಸನ ಸಾಂಸ್ಕೃತಿಕ ಅಧ್ಯಯನ ಮಾದರಿ. ಹುಲ್ಲೂರು ಶ್ರೀನಿವಾಸ ಜೋಯಿಸರು ಇತಿಹಾಸಕ್ಕೆ ಕಾಲಬದ್ದ, ಕ್ರಮಬದ್ದ ಅಡಿಗಲ್ಲು ಹಾಕಿರುವುದನ್ನು ನಾವುಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆಂದು ತಿಳಿಸಿದರು.
ಗಟ್ಟಿ ಸಂಶೋಧಕರುಗಳಿದ್ದರೆ ನನ್ನ ಪುಸ್ತಕಗಳನ್ನು ವಿಮರ್ಶೆ ಮಾಡಲಿ. ಅಸ್ತಿತ್ವಕ್ಕೆ ಅರ್ಥ, ವ್ಯಕ್ತಿತ್ವಕ್ಕೆ ಬೆಲೆ, ವಿಚಾರಕ್ಕೆ ಮಾನ್ಯತೆ ಈ ಮೂರು ಚಿದಾನಂದಮೂರ್ತಿಯವರಲ್ಲಿತ್ತು. ಅವರಲ್ಲಿದ್ದ ನಿರಂತರ ಅಧ್ಯಯನ ನಿಷ್ಠೆಯನ್ನು ನಾವು ಪಾಲಿಸೋಣ. ಕನ್ನಡ ವಿಶ್ವವಿದ್ಯಾನಿಲಯ ಆರಂಭಕ್ಕೆ ಚಿದಾನಂದಮೂರ್ತಿ ಕಾರಣ. ನನಗೆ ಸಿಕ್ಕಿರುವ ದೊಡ್ಡ ಗೌರವವನ್ನು ಚಿತ್ರದುರ್ಗದ ಜನಕ್ಕೆ ಅರ್ಪಿಸುತ್ತೇನೆಂದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ ನನ್ನನ್ನು ಶಾಸನ ಕ್ಷೇತ್ರಕ್ಕೆ ನೂಕಿದವರು ಚಿದಾನಂದಮೂರ್ತಿಯವರು. ಸಂಶೋಧನ ಬರಹ ಯಾವ ರೀತಿ ಇರಬೇಕೆಂದು ಮಾರ್ಗದರ್ಶನ ಕೊಟ್ಟವರು ಚಿದಾನಂದಮೂರ್ತಿ. ಅವರು ನನಗೆ ಕೇವಲ ಗುರುಗಳಲ್ಲ. ಅನೇಕ ಸಂದರ್ಭಗಳಲ್ಲಿ ನಮ್ಮ ಮನಗೆ ಬಂದು ಆಶೀರ್ವದಿಸಿದವರು ಎಂದು ಗುಣಗಾನ ಮಾಡಿದರು. ಡಾ.ಲಕ್ಷ್ಮಣ್ ತೆಲಗಾವಿ ಈ ಪ್ರಶಸ್ತಿಗೆ ಅರ್ಹರು. ಸ್ಥಳೀಯ ಇತಿಹಾಸವನ್ನು ಗೌರವಿಸುವ ತೆಲಗಾವಿರವರಲ್ಲಿ ಅಹಂ ಇಲ್ಲ. ವಿದ್ವತ್ತಿನ ಜೊತೆ ಸಂಯಮವಿದೆ. ಸಣ್ಣ ಆಕರವನ್ನು ಕೂಡ ನಿರ್ಲಕ್ಷಿಸಿದವರಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ಥಳೀಯ ಚರಿತ್ರೆಗಳನ್ನು ಗಟ್ಟಿಗೊಳಿಸುವುದು ಇವರ ಸಂಶೋಧನಾ ಚರಿತ್ರೆ ಎಂದರೆ ಹಿಂದಿನದಲ್ಲಿ ಮುಂದಿನ ಭವಿಷ್ಯವನ್ನು ಹೇಳುತ್ತದೆ. ಚಿದಾನಂದ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.
ರಾಜಾವೀರ ಮದಕರಿನಾಯಕ ಟ್ರೇಡರ್‍ಸ್‌ನ ಮಾಲೀಕ ಕುಮಾರ್ ಬಡಪ್ಪ ಮಾತನಾಡಿ ಡಾ.ಲಕ್ಷ್ಮಣ್ ತೆಲಗಾವಿರವರ ಇತಿಹಾಸ ಸಂಶೋಧನೆಯನ್ನು ಗುರುತಿಸಿ ಚಿದಾನಂದ ಪ್ರಶಸ್ತಿ ನೀಡಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ. ಸಂಶೋಧನೆಯ ಹಾದಿಯಲ್ಲಿ ಇವರ ಹೆಸರು ಚಿರಸ್ಥಾಯಿಯಾಗಬೇಕೆಂದು ಡಾ.ಲಕ್ಷ್ಮಣ್ ತೆಲಗಾವಿರವರ ಕುರಿತು ಬರೆದಿರುವ ಕವನವನ್ನು ವಾಚಿಸಿದರು.
ಶಾಸನ ತಜ್ಞ ಹಾಗೂ ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ ಅಭಿನಂದನಾ ನುಡಿಗಳನ್ನಾಡುತ್ತ ಸಂಶೋಧನೆಯಲ್ಲಿ ಜಾತಿಯನ್ನು ಮೀರಿ ಗುರುತಿಸಿಕೊಂಡವರು ಡಾ.ಲಕ್ಷ್ಮಣ್‌ತೆಲಗಾವಿರವರು. ವಿಶ್ವವಿದ್ಯಾನಿಲಯಗಳಲ್ಲಿ ಕಳಪೆ ಸಂಶೋಧನೆಗಳಾಗುತ್ತಿವೆ. ಇದಕ್ಕೆ ಪ್ರಾಧ್ಯಾಪಕರು, ಮಾರ್ಗದರ್ಶಕರುಗಳು ಕಾರಣ. ಗಟ್ಟಿ ಸಂಶೋಧನೆಗಳು ಅವನತ್ತಿಯತ್ತ ಸಾಗುತ್ತಿವೆ. ಇಂದಿನ ಹೊಸ ಪೀಳಿಗೆಯ ಸಂಶೋಧಕರುಗಳು, ಡಾ.ಚಿದಾನಂದಮೂರ್ತಿ ಹಾಗೂ ಡಾ.ಲಕ್ಷ್ಮಣ್‌ತೆಲಗಾವಿರವರಲ್ಲಿರುವ ಸಂಶೋಧನಾ ಬದ್ದತೆಯನ್ನು ಪಾಲಿಸಬೇಕಿದೆ ಎಂದು ಸಲಹೆ ನೀಡಿದರು.
ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಡಾ.ಸಿ.ಯು.ಮಂಜುನಾಥ್ ವೇದಿಕೆಯಲ್ಲಿದ್ದರು. ಸಿ.ಬಿ.ಶೈಲಾ ಜಯಕುಮಾರ್ ನಿರೂಪಿಸಿದರು.
ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಾಂತೇಶ್, ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಹೆಚ್.ಲಿಂಗಪ್ಪ, ಮೃತ್ಯುಂಜಯ, ನಗರಸಭೆ ಮಾಜಿ ಸದಸ್ಯ ನಾಗರಾಜ್, ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಮದಕರಿನಾಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ನ್ಯಾಯವಾದಿ ಎಚ್.ಎಂ.ಎಸ್.ನಾಯಕ, ಎಂ.ಜಿ.ರಂಗಸ್ವಾಮಿ, ನಿರಂಜನ ದೇವರಮನೆ ಸೇರಿದಂತೆ ಡಾ.ಲಕ್ಷ್ಮಣ್‌ತೆಲಗಾವಿರವರ ಅಪಾರ ಅಭಿಮಾನಿಗಳು ವಿದ್ಯಾರ್ಥಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು.



