ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ 4399 ದಿನಗಳಿಂದ ದೇಶವನ್ನು ಮುನ್ನಡೆಸಿ, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿಯಾಗಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಪೂಜೆ ಹಾಗೂ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖ ನಾಯಕರು ಬೆಂಗಳೂರಿನ ಪುರಾಣ ಪ್ರಸಿದ್ಧ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, "ಭಾರತಮಾತೆಯನ್ನು ಜಗದ್ಗುರುವಿನ ಸ್ಥಾನದಲ್ಲಿ ನಿಲ್ಲಿಸಲು ಒಂದು ದಿನವೂ ವಿರಮಿಸದೆ, ಹಗಲಿರುಳು ಶ್ರಮಿಸುತ್ತಿರುವ ಹೆಮ್ಮೆಯ ನಾಯಕ ಶ್ರೀ ನರೇಂದ್ರ ಮೋದಿ ಜೀ ಅವರ ಸಂಕಲ್ಪ ಶಕ್ತಿಗೆ ಮತ್ತು ಅವರ ನಿರಂತರ ಜನಸೇವೆಯ ತಪಸ್ಸಿಗೆ ಈ ಧಾರ್ಮಿಕ ಕೈಂಕರ್ಯದ ಮೂಲಕ ಗೌರವ ಸಮರ್ಪಿಸಲಾಗಿದೆ" ಎಂದು ತಿಳಿಸಿದರು.
ಸಿಹಿ ಹಂಚಿಕೆ: ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪಕ್ಷದ ಕಚೇರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಸುತ್ತಮುತ್ತಲಿನ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸ ಹಂಚಿಕೊಳ್ಳಲಾಯಿತು.
ದೀರ್ಘಾವಧಿ ಪ್ರಧಾನಿ ಸಾಧನೆ: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸತತವಾಗಿ 4399 ದಿನಗಳ ಕಾಲ ದೇಶವನ್ನು ಮುನ್ನಡೆಸಿದ ದೀರ್ಘಾವಧಿ ಚುನಾಯಿತ ಪ್ರಧಾನಿ ಎಂಬ ಅಭೂತಪೂರ್ವ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.
ಈ ಐತಿಹಾಸಿಕ ಸಂದರ್ಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾಧ್ಯಕ್ಷ ಹರೀಶ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಶಾಸಕರಾದ ಮಾನಪ್ಪ ವಜ್ಜಲ್ ಹಾಗೂ ಶಿವರಾಜ್ ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.



