ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸಕ್ತ ಸಾಲಿನಲ್ಲಿ ಫಸಲ್ ಬಿಮಾ ಯೋಜನೆಗೆ ನೊಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನಾಂಕವಾಗಿದೆ. ರಾಜ್ಯ ಬೆಳೆ ವಿಮೆ ದಿನಾಂಕವನ್ನು ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
ಚಿತ್ರದುರ್ಗ ನಗರದ ಮರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳು ಸದಾ ಬರಪೀಡಿತ ಪ್ರದೇಶಗಳಾಗಿದ್ದು, ರೈತರು ಬೆಳೆ ವಿಮೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. 2025-26ನೇ ಸಾಲಿನಲ್ಲಿ ಜಿಲ್ಲೆಗೆ ಬಂದ ರೂ.81 ಕೋಟಿ ವಿಮಾ ಪರಿಹಾರದಲ್ಲಿ, ರೂ.53 ಕೋಟಿ ಹಣ ಚಳ್ಳಕೆರೆ ತಾಲೂಕಿನ ರೈತರಿಗೇ ತಲುಪಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಈ ಗಡುವನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಮೂರು ಜಿಲ್ಲೆಗಳ ನಾಲ್ಕು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ಅಣೆಕಟ್ಟಿ ಹಿನ್ನೀರಿನ ಇಂಟೇಕ್ ಚಾನೆಲ್ ಮಟ್ಟವನ್ನು ಪ್ರಸ್ತುತ ಇರುವ 486 ಮೀಟರ್‍ಗಳಿಂದ 472 ಮೀಟರ್‍ಗೆ ಇಳಿಸಬೇಕು. ಹೀಗೆ ಮಾಡಿದರೆ ಮಾತ್ರ ಬೇಸಿಗೆ ಕಾಲದಲ್ಲೂ ಚಳ್ಳಕೆರೆ ಹಾಗೂ ಮೊಳಕಾಲ್ಮೂರಿಗೆ ನೀರು ಸಿಗಲು ಸಾಧ್ಯ. ಈ ಯೋಜನೆಯ ತಾಂತ್ರಿಕ ಪ್ರಸ್ತಾವನೆಯನ್ನು ನೀರಾವರಿ ಇಲಾಖೆ ತುಂಗಭದ್ರಾ ಮಂಡಳಿಗೆ ಕಳುಹಿಸಿದ್ದು, ಶೀಘ್ರ ಅನುಮೋದನೆ ದೊರಕಿಸಿಕೊಡಬೇಕೆಂದು ಕೋರಿದರು.
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ತ್ವರಿತಗೊಳಿಸಿ, ಕೆರೆಗಳಿಗೆ ನೀರು ಹರಿಸುವ ಕೆಲಸ ಆಗಬೇಕು. ಗೋನೂರು ಅಕ್ವಡಕ್ಟ್ ಕಾಮಗಾರಿ ಪೂರ್ಣಗೊಂಡರೆ ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು, ಪಾವಗಡ ಹಾಗೂ ಚಿತ್ರದುರ್ಗ ಭಾಗಗಳಿಗೆ ಅನುಕೂಲವಾಗಲಿದೆ ಎಂದರು.
ಕ್ಷೇತ್ರದ ದೇವರ ಎತ್ತುಗಳಿಗೆ ಮೇವಿನ ಕೊರತೆಯಾಗದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ತಕ್ಷಣವೇ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.



