ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ರಾಷ್ಟ್ರೀಯ ಪ್ರಯೋಗಾಲಯಗಳ ಸತ್ಯಾಪನೆ ಮತ್ತು ಮಾನ್ಯತಾ ಮಂಡಳಿ (ಎನ್‌ಎಬಿಎಲ್)ಯ ಮಾನ್ಯತೆ ದೊರೆತಿದೆ.
ಪ್ರಯೋಗಾಲಯದ ತಾಂತ್ರಿಕ ಸಾಮರ್ಥ್ಯ ಹಾಗೂ ನಿಗದಿತ ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಪರಿಗಣಿಸಿ ಮಾನ್ಯತೆ ದೊರೆತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಜಿ.ಈಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿ ಮಣ್ಣು ಮತ್ತು ನೀರಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅದರ ಆಧಾರದ ಮೇಲೆ ಸೂಕ್ತ ನಿರ್ವಹಣಾ ಕ್ರಮ ಕೊಳ್ಳುವುದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸುತ್ತದೆ. ಹಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ, ಮಣ್ಣಿನ ರಸಸಾರ (ಪಿ.ಎಚ್), ವಿದ್ಯುತ್ ವಾಹಕತೆ ಸೇರಿದಂತೆ ಸುಮಾರು 16 ಪ್ರಮುಖ ಗುಣಲಕ್ಷಣಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವುದರಿಂದ ಬೆಳೆಗೆ ಅಗತ್ಯವಾದ ಪೋಷಕಾಂಶಗಳ ನಿರ್ವಹಣಾ ಕ್ರಮ ರೂಪಿಸಲು ನೆರವಾಗುತ್ತದೆ.
ನೀರಿನ ಪಿ.ಎಚ್, ವಿದ್ಯುತ್ ವಾಹಕತೆ ಸೇರಿದಂತೆ ಸುಮಾರು 12 ಪ್ರಮುಖ ಗುಣಲಕ್ಷಣಗಳನ್ನು ವಿಶ್ಲೇಷಿಸುವುದರಿಂದ ನೀರಾವರಿಗೆ ನೀರು ಸೂಕ್ತವಾಗಿದೆಯೇ ಹಾಗೂ ಅದರಲ್ಲಿರುವ ವಿವಿಧ ರಾಸಾಯನಿಕ ಗುಣಲಕ್ಷಣಗಳು ಕೃಷಿಯ ಮೇಲೆ ಬೀರುವ ಪರಿಣಾಮವನ್ನು ತಿಳಿಯಲು ಸಹಕಾರಿಯಾಗಿದೆ.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯದ ಮೂಲಕ ಇದುವರೆಗೆ ರೈತರಿಂದ ಸಂಗ್ರಹಿಸಲಾದ 10,825 ಮಣ್ಣು ಮಾದರಿ ಹಾಗೂ 7,939 ನೀರಿನ ಮಾದರಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ ಎಂದು ತಿಳಿಸಿದ್ದಾರೆ.




