ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸವರ್ಣಿಯರಿಂದ ದೌರ್ಜನ್ಯಕ್ಕೊಳಗಾಗಿರುವ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ಕೋನಿಗರಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.
ದಿನಾಂಕ : ೨೯-೫-೨೦೧೪ ರಂದು ಸವರ್ಣಿಯರಿಂದ ದೌರ್ಜನ್ಯ, ಬಹಿಷ್ಕಾರಕ್ಕೊಳಪಟ್ಟಿರುವ ನಾವುಗಳು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಬೇಕಾಗಿರುವ ಮೂಲಭೂತ ಸೌಲಭ್ಯಗಳು ಇದುವರೆವಿಗೂ ಸಿಕ್ಕಿಲ್ಲ.
ವಿವಿಧ ಯೋಜನೆಯಡಿ ಸಾಲ ಸೌಲಭ್ಯಗಳನ್ನು ದೊರಕಿಸುವಲ್ಲಿ ಸಂತ್ರಸ್ತ ಕುಟುಂಬಗಳು ಮತ್ತು ಅವಲಂಭಿತರನ್ನು ಆಯ್ಕೆ ಮಾಡಿಕೊಳ್ಳುವ ಬದಲಾಗಿ ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಿ ಮನಸೋಇಚ್ಚೆ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಕಳಿಸಿದ್ದಾರೆ. ಅಧಿಕಾರಿಗಳು ಎಸಗಿರುವ ಲೋಪವನ್ನು ಪರಿಶೀಲಿಸಿ ಪಟ್ಟಿಯಲ್ಲಿ ಕೈಬಿಟ್ಟಿರುವವರ ಹೆಸರುಗಳನ್ನು ಸೇರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಧರಣಿನಿರತರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಗೋವಿಂದಪ್ಪ, ಶ್ರೀನಿವಾಸ, ತಿಪ್ಪೇಸ್ವಾಮಿ, ಅಭಿಷೇಕ್, ಮಂಜುನಾಥ, ಲಕ್ಷ್ಮಕ್ಕ, ಮಮತ, ಎಂ.ಮೇಘ, ಭಾರತಮ್ಮ, ಲಕ್ಷ್ಮಮ್ಮ, ಮೀನಾಕ್ಷಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


