ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತ ಮೋಹನ್ ಗೌಡ ಅವರ ಮನೆ ಮೇಲೆ ಪೊಲೀಸರು ವಾರೆಂಟ್ ಇಲ್ಲದೆ ದಾಳಿ ನಡೆಸಿ, ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಜೆಡಿಎಸ್ ಕಾನೂನು ಘಟಕದ ಸದಸ್ಯ ಹಾಗೂ ವಕ್ತಾರ ಪ್ರದೀಪ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ಜೆಪಿ ಭವನದಲ್ಲಿ ನಡೆದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಹನ್ ಗೌಡ ಮನೆಯಲ್ಲಿಲ್ಲದ ವೇಳೆ ಪೊಲೀಸರು ನುಗ್ಗಿ, ಅವರ ವೃದ್ಧ ತಾಯಿ ಮತ್ತು ಪತ್ನಿ ಪವಿತ್ರಾ ಅವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲದ ಪವಿತ್ರಾ ಅವರ ಮೊಬೈಲ್ ಹಾಗೂ ಪೆನ್ ಡ್ರೈವ್ ಕಸಿದುಕೊಳ್ಳಲು ಯತ್ನಿಸಿ, ಮಹಿಳಾ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಸ್ಟಿಂಗ್ ಆಪರೇಷನ್ನ ಅಸಲಿ ಆರೋಪಿಗಳನ್ನು ರಕ್ಷಿಸುತ್ತಿರುವ ಸರ್ಕಾರ ಹಾಗೂ ಪೊಲೀಸರು, ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ನ್ಯಾಯಾಲಯದ ರಜಾ ದಿನಗಳನ್ನೇ ಅವಕಾಶವನ್ನಾಗಿ ಬಳಸಿಕೊಂಡು ಪೊಲೀಸರು ಈ ದುಂಡಾವರ್ತನೆ ಮೆರೆದಿದ್ದು, ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತಂದಿರುವ ಈ ಘಟನೆಯ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕು ಎಂದು ಪ್ರದೀಪ್ ಗೌಡ ಎಚ್ಚರಿಸಿದ್ದಾರೆ.



