ಚಂದ್ರವಳ್ಳಿ ನ್ಯೂಸ್, ಅನಂತಗಿರಿ (ಆಂಧ್ರಪ್ರದೇಶ):
ಆಂಧ್ರಪ್ರದೇಶದ ಅಲ್ಲೂರಿ ಸೀತಾ ರಾಮರಾಜು ಜಿಲ್ಲೆಯ ಅನಂತಗಿರಿ ಮಂಡಲದಲ್ಲಿ ತಲೆಯೆತ್ತಿದ್ದ ರಸ್ತೆ ವಿಸ್ತರಣೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೀಕರ ಜಿಲೆಟಿನ್ ಕಡ್ಡಿಗಳ ಸ್ಫೋಟಕ್ಕೆ ಶಿಕ್ಷಕಿ ಸೇರಿದಂತೆ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಯ ಹಿನ್ನೆಲೆ ಹಾಗೂ ವಿವರ:
ಪಿನಕೋಟ ಪಂಚಾಯಿತಿ ವ್ಯಾಪ್ತಿಯ ಪೀಚುಮಾಮಿಡಿ ಗ್ರಾಮದ ಸಮೀಪವಿರುವ ಘಾಟ್ ರಸ್ತೆಯಲ್ಲಿ ಬೆಟ್ಟ ಹಾಗೂ ಬಂಡೆಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡುವ ಕಾಮಗಾರಿ ಭರದಿಂದ ಸಾಗುತ್ತಿತ್ತು. ಬಂಡೆಗಳನ್ನು ಸ್ಫೋಟಿಸಲು ಜಿಲೆಟಿನ್ ಕಡ್ಡಿಗಳನ್ನು ಟಿಪ್ಪರ್ ವಾಹನವೊಂದರಲ್ಲಿ ಸಂಗ್ರಹಿಸಿಡಲಾಗಿತ್ತು.
ಇದೇ ವೇಳೆ, ಟಿಪ್ಪರ್ಗೆ ಬೊಲೆರೊ ವಾಹನದಿಂದ ಡೀಸೆಲ್ ಭರ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಈ ಬೆಂಕಿ ವಾಹನದಲ್ಲಿದ್ದ ಜಿಲೆಟಿನ್ ಕಡ್ಡಿಗಳಿಗೆ ವ್ಯಾಪಿಸಿ ಶಕ್ತಿಶಾಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಾಮಗಾರಿ ಸ್ಥಳದಲ್ಲಿದ್ದ ಎರಡೂ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಧ್ವಂಸಗೊಂಡಿವೆ.
ಶಿಕ್ಷಕಿ ಸೇರಿ ಐವರು ಬಲಿ: ಈ ದಾರುಣ ಅಪಘಾತದಲ್ಲಿ ಟಿಪ್ಪರ್ ಚಾಲಕ ಹಾಗೂ ಮೂವರು ಕಾರ್ಮಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇದೇ ವೇಳೆ, ಮುಂಜಾನೆ ರಸ್ತೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವಿಶಾಖಪಟ್ಟಣಂ ಮೂಲದ ಸರ್ಕಾರಿ ಶಾಲಾ ಶಿಕ್ಷಕಿ ಸುನಿತಾ ಎಂಬುವವರು ಕೂಡ ಸ್ಫೋಟದ ತೀವ್ರತೆಗೆ ಸಿಲುಕಿ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ – ತನಿಖೆಗೆ ಆಜ್ಞೆ:
ವಿಷಯ ತಿಳಿದ ತಕ್ಷಣವೇ ಸ್ಥಳೀಯ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಘಟನೆಗೆ ತೀವ್ರ ಕಂಬನಿ ಮಿಡಿದಿರುವ ಅರಕು ಕ್ಷೇತ್ರದ ಶಾಸಕ ರೇಗಂ ಮತ್ಸ್ಯಲಿಂಗಂ, "ಈ ದುರಂತ ಅತ್ಯಂತ ದಿಗ್ಭ್ರಮೆ ಹುಟ್ಟಿಸಿದೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯ ಪರಿಹಾರ ಹಾಗೂ ನೆರವು ತಲುಪಿಸಲಾಗುವುದು," ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ನಿರ್ಲಕ್ಷ್ಯ ವಹಿಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



