ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಬಾಂಗ್ಲಾದೇಶದ 30 ವರ್ಷದ ಮಹಿಳೆಯೊಬ್ಬರನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.
ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆ ಮಹಿಳೆಯು ತನ್ನನ್ನು ವೇಶ್ಯಾವಾಟಿಕೆ ದಂಧೆಯಿಂದ ರಕ್ಷಿಸಿ ಎಂದು ಸಹಾಯ ಕೋರಿ ಹುಳಿಮಾವು ಪೊಲೀಸ್ ಠಾಣೆಗೆ ಭಾನುವಾರ ಬಂದಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಅಚ್ಚರಿಯ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಬ್ಯೂಟಿಪಾರ್ಲರ್ ಕೆಲಸದ ನಂತರ ವೇಶ್ಯಾವಾಟಿಕೆ:
ಸಂತ್ರಸ್ತೆ ನೀಡಿದ ಮಾಹಿತಿಯಂತೆ, ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಭಾರತಕ್ಕೆ ಕರೆತಂದರು. ನನ್ನೊಂದಿಗೆ ಮತ್ತಷ್ಟು ಮಹಿಳೆಯರೂ ಇದ್ದರು. ಬಳಿಕ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆಗೆ ತಳ್ಳಿದರು. ಆರಂಭದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ತಿಂಗಳಿಗೆ 15 ಸಾವಿರದಿಂದ 20 ಸಾವಿರ ರೂಪಾಯಿ ಸಂಬಳದ ಸಿಬ್ಬಂದಿಯಾಗಿ ಕೆಲಸ ನೀಡಲಾಯಿತು.
ಆದರೆ, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಒಂದು ಮನೆಯಲ್ಲಿ ಇರಿಸಿದಾಗ ತನ್ನನ್ನು ವೇಶ್ಯಾವಾಟಿಕೆಗೆ ತಳ್ಳಿರುವುದು ತಿಳಿದು ಬಂದಿತು ಎಂದು ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
ತನಗೆ ಆರೋಪಿಗಳು ಮಾನಸಿಕವಾಗಿ ಹಿಂಸಿಸಿದರು. ತನ್ನನ್ನು ಇಬ್ಬರು ಪುರುಷರೊಂದಿಗೆ ಕಾರಿನಲ್ಲಿ ಕಳುಹಿಸಿದರು. ಅವರು ಬನ್ನೇರುಘಟ್ಟ ರಸ್ತೆಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿದರು. ಅವರು ಸೇವಿಸುತ್ತಿದ್ದಾಗ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.


