ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಮತ್ತು ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ವಿಧಿಸಿದ್ದ 2015ರ ಡಿಸೆಂಬರ್ 31ರ ಕಟ್-ಆಫ್ ದಿನಾಂಕವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಆದರೆ, ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪರವಾಗಿ ಏಕಸದಸ್ಯ ಪೀಠ (ಡಿ.8, 2023) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ಸರ್ಕಾರದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದೆ.
ನ್ಯಾಯಪೀಠದ ಪ್ರಮುಖ ನಿರ್ದೇಶನಗಳು: ಸಾರಾಸಗಟು ತಿರಸ್ಕಾರಕ್ಕೆ ಬ್ರೇಕ್: ಯಾವುದೇ ಸೂಕ್ತ ನೀತಿ ಅಥವಾ ತಾರ್ಕಿಕ ಕಾರಣವಿಲ್ಲದೆ ಕೇವಲ 2015ರ ನಂತರ ಖಾಲಿಯಾದ ಹುದ್ದೆಗಳೆಂಬ ಕಾರಣಕ್ಕೆ ನೇಮಕಾತಿ ಅನುಮತಿ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ. ಕೋವಿಡ್-19 ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ 2020ರಲ್ಲಿ ಹೊರಡಿಸಿದ್ದ ನೇಮಕಾತಿ ನಿರ್ಬಂಧವು 2020-21ನೇ ಸಾಲಿಗೆ ಮಾತ್ರ ಸೀಮಿತವಾಗಿತ್ತು; ಅದನ್ನು ಶಾಶ್ವತ ನಿಷೇಧವೆಂದು ಪರಿಗಣಿಸಲಾಗದು.
ಪೂರ್ವಾನುಮತಿ ಕಡ್ಡಾಯ: ನೇಮಕಾತಿ ಕುರಿತು ಸರ್ಕಾರಕ್ಕೆ ಕೇವಲ ಮಾಹಿತಿ ನೀಡಿದರೆ ಸಾಕು ಎಂಬ ಏಕಸದಸ್ಯ ಪೀಠದ ಅಂಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದೆ. 1999ರ ಮತ್ತು 2006ರ ನಿಯಮಗಳ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಕೆ ಮತ್ತು ಕಾಲಮಿತಿ: ಒಕ್ಕೂಟವು ಸದಸ್ಯ ಸಂಸ್ಥೆಗಳ ಪರವಾಗಿ ಅರ್ಜಿ ಸಲ್ಲಿಸಲು ಅಧಿಕಾರ ಹೊಂದಿಲ್ಲ. ಹೀಗಾಗಿ ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೇ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಎರಡು ತಿಂಗಳೊಳಗೆ ಸರ್ಕಾರ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು; ತಿರಸ್ಕರಿಸುವುದಾದರೆ ಸೂಕ್ತ ಕಾರಣ ನೀಡಬೇಕು.
ಮಾನದಂಡಗಳ ಪರಿಶೀಲನೆ: ನೇಮಕಾತಿಗೆ ಅನುಮತಿ ನೀಡುವ ಮುನ್ನ ಸರ್ಕಾರದ ಮೇಲಾಗುವ ಆರ್ಥಿಕ ಹೊರೆ, ವಿದ್ಯಾರ್ಥಿಗಳ ಸಂಖ್ಯೆ, ಮಂಜೂರಾದ ಹುದ್ದೆಗಳು, ಮೀಸಲಾತಿ ರೋಸ್ಟರ್ ಹಾಗೂ ಹುದ್ದೆ ಖಾಲಿ ಇರುವುದರಿಂದ ಶಿಕ್ಷಣದ ಗುಣಮಟ್ಟದ ಮೇಲಾಗುವ ಪರಿಣಾಮಗಳನ್ನು ಪರಿಗಣಿಸಬೇಕು.
ಸ್ವಯಂಚಾಲಿತ ಹಕ್ಕಲ್ಲ: ಈ ಆದೇಶದಿಂದ ಖಾಲಿ ಹುದ್ದೆ ಭರ್ತಿ ಮಾಡುವ ಅಥವಾ ಸರ್ಕಾರದಿಂದ ವೇತನ ಅನುದಾನ ಪಡೆಯುವ ಸ್ವಯಂಚಾಲಿತ ಹಕ್ಕು ಸಂಸ್ಥೆಗಳಿಗೆ ದೊರೆಯುವುದಿಲ್ಲ. ಅನುದಾನ ನೀಡುವ ಅಂತಿಮ ಅಧಿಕಾರ ಸರ್ಕಾರಕ್ಕೇ ಇರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಹಿನ್ನೆಲೆ: ಆರ್ಥಿಕ ಮಿತಿ ಹಾಗೂ ಕೋವಿಡ್ ಕಾರಣಗಳನ್ನು ನೀಡಿ 2015ರ ಡಿಸೆಂಬರ್ 31ರ ನಂತರ ಖಾಲಿಯಾದ ಅನುದಾನಿತ ಸಂಸ್ಥೆಗಳ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು.




