ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಒಟ್ಟು ಮೂರು ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ.
ಇದರ ಬೆನ್ನಲ್ಲೇ ವಿಚಾರಣಾ ಕೋರ್ಟ್‌ನಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಮಹತ್ವದ ಹೇಳಿಕೆಗಳನ್ನು ದಾಖಲಿಸುತ್ತಿರುವುದು ದರ್ಶನ್ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಕಾನೂನು ಹೋರಾಟ: ಮಾಫಿ ಸಾಕ್ಷಿ ಆದೇಶ ನೀಡುವ ಮುನ್ನ ಸಹ-ಆರೋಪಿಯ ವಾದ ಆಲಿಸುವ ಅಗತ್ಯವಿಲ್ಲ ಎಂಬ ಹೈಕೋರ್ಟ್‌ನ ತೀರ್ಪನ್ನು ಹಾಗೂ ಮಾಫಿ ಸಾಕ್ಷಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದರ್ಶನ್ ಸುಪ್ರೀಂಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಾರೆ.
ವಿಜಯಲಕ್ಷ್ಮಿ ಮೇಲ್ಮನವಿ: ಮಾಫಿ ಸಾಕ್ಷಿ ಆದೇಶವನ್ನು ಎತ್ತಿಹಿಡಿದು ಹೈಕೋರ್ಟ್ ಸೆಪ್ಟೆಂಬರ್ 23 ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮತ್ತೊಂದು ವಿಶೇಷ ಮೇಲ್ಮನವಿ ಸಲ್ಲಿಸಿದ್ದಾರೆ.
ಕುತೂಹಲ ಮೂಡಿಸಿದ ಅರ್ಜಿಗಳು: ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಕಡೆಯಿಂದ ಸಲ್ಲಿಕೆಯಾಗಿರುವ ಒಟ್ಟು ಮೂರು ಅರ್ಜಿಗಳ ವಿಚಾರಣೆ ಇದೇ ವಾರದಲ್ಲಿ ನಡೆಯುವ ಸಾಧ್ಯತೆಯಿದ್ದು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಭಾರೀ ಕುತೂಹಲ ಮೂಡಿಸಿದೆ.
ಕೋರ್ಟ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ಸ್ಪೋಟಕ ಹೇಳಿಕೆ ದಾಖಲು ಮತ್ತೊಂದೆಡೆ ಬೆಂಗಳೂರಿನ 59ನೇ ಸಿಸಿಎಚ್ ಸೆಷನ್ಸ್‌ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಹಾಗೂ ದರ್ಶನ್ ಆಪ್ತ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಬಿರುಸಿನಿಂದ ಮುಂದುವರಿದಿದೆ.
ವಿಚಾರಣೆಗೆ ತಡೆ ನಿರಾಕರಣೆ: ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿ ಪ್ರದೋಷ್ ವಿಚಾರಣೆಗೆ ತಡೆ ನೀಡುವಂತೆ ದರ್ಶನ್ ವಕೀಲರು ಸಲ್ಲಿಸಿದ್ದ ಮೆಮೋವನ್ನು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಜಾಗೊಳಿಸಿದರು.
ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ: ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಹಾಗೂ ಸಹ-ಆರೋಪಿಗಳು ಹಾಜರಿದ್ದು, ಕಾವೇರಿದ ವಾತಾವರಣದ ನಡುವೆ ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ವಿಚಾರಣೆ ನಡೆದು ಮಹತ್ವದ ಸಂಗತಿಗಳು ಹೊರಬೀಳುತ್ತಿವೆ.
ದರ್ಶನ್ ಪಾಳಯದಲ್ಲಿ ನಡುಕ: ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಏನು ಎಂಬುದರ ಬಗ್ಗೆ ಪ್ರದೋಷ್ ಕಟಕಟೆಯಲ್ಲಿ ನಿಂತು ಸತ್ಯಾಸತ್ಯತೆಗಳನ್ನು ಬಿಚ್ಚಿಡುತ್ತಿರುವುದು ದರ್ಶನ್ ಪರ ವಕೀಲರು ಹಾಗೂ ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ಗೆ ಕಾನೂನು ಜಯ ಸಿಗಲಿದೆಯೇ ಅಥವಾ ಕೆಳಾಲಯದ ವಿಚಾರಣೆಯೇ ಮುಂದುವರಿಯಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




