ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲ್ಲೂಕಿನ ಬಾರಂದೂರು ಗ್ರಾಮದ ನಿವಾಸಿ ಸೋಮಶೇಖರ ಆಲಿಯಾಸ್ ಡೆಡ್ಲಿ ಸೋಮ (30) ಬಂಧಿತ. ಈತ ಮೂರು ವರ್ಷಗಳಿಂದ ತನ್ನ ಇರುವಿಕೆಯ ಬಗ್ಗೆ ಯಾವುದೇ ಸುಳಿವು ನೀಡದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸೆ.11ರಂದು ಸಂಜೆ 4.20ರಲ್ಲಿ ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಗಾಂಜಾ ಮಾರಾಟ ಮಾಡಲು ಬಂದಿದ್ದ ಸೋಮಶೇಖರನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಯಿಂದ 1 ಲಕ್ಷ ರೂ. | ಮೌಲ್ಯದ 2 ಕೆ.ಜಿ. 64 ಗ್ರಾಂ ತೂಕದ ಗಾಂಜಾ
ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ವಿ.ಚಂದ್ರಕಾಂತ್, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವೆಂಕಟೇಶ್ ಪ್ರಸನ್ನ ಲಕ್ಷ್ಮೀನಾರಾಯಣ ಸೂಚನೆಯಂತೆ, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿಎಸ್.ಪಾಂಡುರಂಗ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ದೊಡ್ಡಬಳ್ಳಾಪುರ ಟೌನ್ ಇನ್ಸ್‌ಪೆಕ್ಟರ್ ಎಚ್.ಮುತ್ತುರಾಜು ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಪಾಂಡುರಂಗ, ಶಿವಾನಂದ, ರೂಪೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿಯನ್ನು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರು ಶ್ಲಾಘಿಸಿ ಮೆಚ್ಚುಗೆ ಅಭಿನಂದನೆ ಸಲ್ಲಿಸಿದ್ದಾರೆ.




