ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪ್ರತಿಯೊಂದು ನಿಮಿಷವನ್ನೂ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರು ಸಮಯ ಪಾಲನೆಗೆ ಅಪಾರ ಮಹತ್ವ ನೀಡುತ್ತಿದ್ದರು ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಹೇಳಿದರು.
ಹಿರಿಯೂರು ತಾಲೂಕು ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಹಾಗೂ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಹಿರಿಯೂರಿನಲ್ಲಿ ಆಯೋಜಿಸಿದ್ದ ಸರ್ ಎಂ.ವಿ. ಅವರ ಜನ್ಮದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸರ್ ಎಂ.ವಿ. ಅವರು ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಆಡಳಿತ ಮತ್ತು ತಾಂತ್ರಿಕ ಕಾರ್ಯಗಳಲ್ಲಿ ಯಾವುದೇ ಆಯಾಸವಿಲ್ಲದೆ ಕೆಲಸ ಮಾಡುತ್ತಿದ್ದರು ಎಂದು ವಾಸೀಂ ತಿಳಿಸಿದರು.
ಅಧಿಕೃತ ಕೆಲಸಕ್ಕೆ ಸರ್ಕಾರದ ಹಣ ಮತ್ತು ದೀಪಗಳನ್ನು (ಮೇಣದಬತ್ತಿ), ವೈಯಕ್ತಿಕ ಓದಿಗೆ ಸ್ವಂತ ದೀಪಗಳನ್ನು ಬಳಸುವ ಮೂಲಕ ಪ್ರಾಮಾಣಿಕತೆಗೆ ಅವರು ಹೆಸರಾಗಿದ್ದರು ಎಂದು ಹೇಳಿದರು.
ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸುವಾಗ ಭ್ರಷ್ಟಾಚಾರರಹಿತ ಹಾಗೂ ಪಾರದರ್ಶಕ ಆಡಳಿತ ನೀಡಿದರು. ಪುಣೆಯ ಖಡಕ್ವಾಸ್ಲಾ ಅಣೆಕಟ್ಟು ಹಾಗೂ ಕೆ.ಆರ್.ಎಸ್ ಅಣೆಕಟ್ಟುಗಳಿಗೆ ಸ್ವಯಂಚಾಲಿತ ನೀರಿನ ಗೇಟ್‌ಗಳನ್ನು ವಿನ್ಯಾಸಗೊಳಿಸಿ ಪೇಟೆಂಟ್ ಪಡೆದರು ಎಂದು ತಿಳಿಸಿದರು.
ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಹಾಗೂ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಎಚ್.ಟಿ. ಎಚ್.ಪಿ. ಗುರುದೇವ್ ಅಧ್ಯಕ್ಷತೆ ವಹಿಸಿ ಮಾತನಾಡಿ "ಕೈಗಾರಿಕೀಕರಣ ಇಲ್ಲವೇ ವಿನಾಶ" ಎಂಬ ಸೂತ್ರದೊಂದಿಗೆ ಭದ್ರಾವತಿಯ ಕರ್ಬ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಬ್ಯಾಂಕ್ (ಎಸ್‌ಬಿಎಂ), ಮೈಸೂರು ವಿಶ್ವವಿದ್ಯಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳ ಸ್ಥಾಪನೆಗೆ ಸರ್ ಎಂವಿ ಅವರು ಕಾರಣರಾದರು. ಅವರ ಅಚಲ ಕರ್ತವ್ಯ ನಿಷ್ಠೆ ಮತ್ತು ಸಾರ್ವಜನಿಕ ಜೀವನದ ಮೌಲ್ಯಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಸಂಸ್ಥೆಯ ಖಜಾಂಚಿ ವಿ.ಮಂಜುನಾಥ್ ಮಾತನಾಡಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 166ನೇ ಜನ್ಮದಿನದ ಅಂಗವಾಗಿ ಈ ವಿಶೇಷ ಕಾರ್ಯಕ್ರಮದಲ್ಲಿ ನಗರಸಭೆ, ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದ ಗೌರವ ಹೆಚ್ಚಿಸಿದ್ದಾರೆ ಎಂದರು.
ಹಿರಿಯೂರು ನಗರಸಭೆ ಎಇಇ ಕೆ.ಟಿ. ಸುನಿಲ್, ಯುಬಿಪಿ ಇಇ ಚಂದ್ರಪ್ಪ, ಲೋಕೋಪಯೋಗಿ ಇಲಾಖೆ ಎಇಇ ಅನಂತರಾಜು, ವಾಣಿ ವಿಲಾಸ ಜಲಾಶಯದ ಎಇಇ ಜಯಕುಮಾರ್ ಆರ್.ಎಸ್, ಯುಬಿಪಿ ಎಇಇ ಬಸವರಾಜ್ ಬಿ.ಎಚ್, ಚಿತ್ರದುರ್ಗ ನಗರಸಭೆ ಎಇಇ ರಜಿನಿ ಕೆ., ಯುಬಿಪಿ ಎಇಇ ವೀರಣ್ಣ, ಲೋಕೋಪಯೋಗಿ ಇಲಾಖೆ ಇಇ ಶ್ರೀರಂಗಪ್ಪ, ಎಇ ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.




