ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ಬನ್ನಪ್ಪ ಪಾರ್ಕ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ 'ಅಖಂಡ ಭಾರತ ಸಂಕಲ್ಪ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಇತಿಹಾಸ ಮತ್ತು ದೇಶಕ್ಕಾಗಿ RSS ನೀಡಿರುವ ಕೊಡುಗೆಗಳು ದೇಶಪ್ರೇಮಿಗಳಿಗೆ ಸ್ಪಷ್ಟವಾಗಿ ತಿಳಿದಿವೆ ಎಂದರು.
ಸಂಸ್ಥೆಯ ನೋಂದಣಿ ಕುರಿತು ಸ್ಪಷ್ಟನೆ: "ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ, ಮುಂಬರುವ ದಿನಗಳಲ್ಲಿ ನೋಂದಣಿ ಮಾಡಿಸುವುದೂ ಇಲ್ಲ. ಈಗಾಗಲೇ ನೋಂದಣಿಯಾಗಿರುವ ಹಲವು ಸಂಘಟನೆಗಳು ದೇಶದಲ್ಲಿ ಏನೇನು ಮಾಡುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ," ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದರು.
ಚಾಮರಾಜಪೇಟೆ, ಶಿವಾಜಿನಗರ ಕ್ಷೇತ್ರಗಳಿಗೆ ಸವಾಲು: "ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನ ಶಿವಾಜಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಪ್ರತಿನಿಧಿಯನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಹಿಂದೂ ನಾಯಕರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ತೋರಿಸುವಂತೆ ನಾನು ಸವಾಲು ಹಾಕುತ್ತೇನೆ," ಎಂದರು.
ಇತಿಹಾಸ ನೆನಪಿಸಿದ ಸಂತೋಷ್: "ರಜಾಕರ ದಾಳಿಗೆ ಹೆದರಿ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಓಡಿಬಂದು ಗುಲ್ಬರ್ಗದಲ್ಲಿ ಜೀವನ ಕಟ್ಟಿಕೊಂಡಿತು. ಅಂದು ನಿಮ್ಮ ಕುಟುಂಬ ನೆಮ್ಮದಿಯಿಂದ ವಾಸ ಮಾಡಲು ಹಿಂದೂಗಳೇ ಕಾರಣ. ರಜಾಕರ ವಿರುದ್ಧ ಹೋರಾಡಲು ಅಂದು ಯಾವುದೇ ಪೊಲೀಸರಾಗಲಿ, ರಾಜಕಾರಣಿಗಳಾಗಲಿ ಬರಲಿಲ್ಲ; ಬದಲಾಗಿ ಇದೇ RSS ಕಾರ್ಯಕರ್ತರು ಬೀದಿಗಿಳಿದು ನಿಂತಿದ್ದರು ಎಂಬುದನ್ನು ಪ್ರಿಯಾಂಕ್ ಖರ್ಗೆ ನೆನಪಿಟ್ಟುಕೊಳ್ಳಬೇಕು," ಎಂದು ಕಿಡಿಕಾರಿದರು.



