ಸಂತ ಹಟ್ಟಿ ತಿಪ್ಪಯ್ಯ
---------------------------
ಜನ ಮನದ ಕಾಯಕ ಯೋಗಿ
ಏಕಾಂತ ಧ್ಯಾನಿಯೇ
ಬುಡಕಟ್ಟು ಬೇಡವಾಯಿತೇ
ಕಾಡುಕುಲ ಬಡವಾಯಿತೇ
ಮಾರಿಯ ಮರುಳು ಮನೆಗೆ
ಬೆತ್ತ ಜೋಳಿಗೆ ಪವಾಡಗಳು
ಮಾಡಿದಷ್ಟು ನೀಡು ಬಿಕ್ಷೆ
ಕೆರೆ ಕಟ್ಟೆ ಬಾವಿಗಳು
ನೆಲ ಜಲ ಬಿಂದಿಗೆಗಳು
ಬರಡು ಬಯಲ ಭಗೀರಥ
ಅವಧೂತ ಅರಿವ ಗುರುವೇ
ನುಡಿದವು ನಡೆದಾಡಿದವು
ಮೆಚ್ಚಿದವರ ಇಚ್ಛೆಯಂತೆ
ಪುರಾಣ ಕಥೆಗಳೂ ಹುಟ್ಟಿದವು
ಕೊಂಡಾಡಿದ ಅನಕ್ಷರ ಹಾಡುಗಳೇ
ತಲೆಮಾರು ಶಾಸನಗಳು
ಕಲ್ಲು ಕೆತ್ತನೆಗಳಲ್ಲ ಅವು
ಉಸಿರ ದ್ವನಿ ಬಿತ್ತನೆಗಳು
ಮಿಥ್ಯ ನೇಪಥ್ಯ ಹಾದಿಯಲಿ
ಮಲಗಿದ ಮನೆ ಮಂಕಾಗಿದೆ
ಇತ್ತೀಚಿನ ಮಡಿಗುಡಿ ಜ್ವಲಿಸಿದೆ
ತುರು ಕರುಗಳ ಮಂದೆಯಲಿ
ತಿಪ್ಪೆಯೊಳಾಡುತ್ತ ಬೆಳೆದವ
ಅಂತೂ ಈಗೀಗ ಭಕ್ತರ
ರುದ್ರನಾಗಿ ಬೀಗುತ್ತಿರುವೆ
ಕಾಳಹಸ್ತೇಶ್ವರಗೆ ಕಣ್ಣಿಟ್ಟ
ದಿಣ್ಣನ ಎಡೆ ಒಪ್ಪಿತವಾದರೆ
ನಿನಗಿಟ್ಟ ಮೀಸಲು ಹರಕೆ
ಮಾಂಸದೆಡೆ ಅರ್ಪಿತವೇ
ರಾಮಾಯಣ ಬರೆದವ
ಬ್ರಾಹ್ಮಣ್ಯ ಹೊತ್ತಂತೆ
ಜಟಾಯು ಸುಗ್ರೀವ ಶಬರಿ
ಸೈನ್ಯ ಸೇವೆಯವರಂತೆ
ಮಹಾಭಾರತ ದ್ರೋಣರಿಗೆ
ಗುರುದಕ್ಷಿಣೆ ಹೆಬ್ಬೆರಳಂತೆ
ನೀನೋ ಕೈಲಾಸದಿ ಬಂದೆಂತೆ
ನಮ್ಮೊಳು ದೈವವಲ್ಲವಾದರೂ
ಕನಿಷ್ಠಕ್ಕಾದರೂ ಜೊತೆಗಿರು
ಹುಟ್ಟು ಗುಟ್ಟಾಗಿಟ್ಟು
ಕಾಡು ಕುಲವ ಕಳಚದಿರು
ಅಂತೆ ಕಂತೆಯ ಸಂತೆಯಲಿ

ಎಲ್ಲರಿಗೂ ಗುರುವಾಗಿರು
ಹತ್ತೂರಾಚೆಗೂ ಹೆಸರು
ಸಂತ ತಿಪ್ಪಯ್ಯನ ಮಹಾತೇರು
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.


