ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಶಾಸಕ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿಆರ್ ಪಾಟೀಲ್ ಜತೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪ ಸಂಬಂಧದ ಆಡಿಯೋ ಬಹಿರಂಗವಾಗಿ ವೈರಲ್ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು, ಪ್ರಕರಣದ ಬಗ್ಗೆ ಸಚಿವ ಜಮೀರ್ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವಿಚಾರವನ್ನೂ ಸರ್ಕಾದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುತ್ತೇನೆ ಎಂದು ಸರ್ಫರಾಜ್ ಖಾನ್ ತಿಳಿಸಿದ್ದಾರೆ.
ಶಾಸಕರು ದೂರವಾಣಿಯಲ್ಲಿ ನನ್ನ ಜೊತೆ ಮಾತನಾಡಿದ್ದನ್ನು ಸೋರಿಕೆ ಮಾಡಿದ್ದು ಅನೈತಿಕವಾದದ್ದು. ಜನಪ್ರತಿನಿಧಿ ಎಂಬ ಕಾರಣಕ್ಕೆ ನಾನು ಮಾತನಾಡಿದ್ದೇನೆ. ಶಾಸಕರೇ ಕರೆ ಮಾಡಿ ಆಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ ಎಂದು ಸರ್ಫರಾಜ್ ಖಾನ್ ಆರೋಪಿಸಿದ್ದಾರೆ. ಆ ಮೂಲಕ, ವೈರಲ್ ಆಗಿರುವ ಆಡಿಯೋ ಅಸಲಿ ಎಂದು ಅವರು ಒಪ್ಪಿಕೊಂಡಂತಾಗಿದ್ದು ಇದು ರಾಜಕೀಯವಾಗಿ ಕಿಚ್ಚು ಹಚ್ಚಿಸಿದೆ.
ಮುಂದುವರೆದು ಮಾತನಾಡಿರುವ ಸರ್ಫರಾಜ್ ಖಾನ್, ಆಡಿಯೋದಲ್ಲೂ ಸ್ಪಷ್ಟವಾಗಿ ಹೇಳಿದ್ದೇನೆ. ಹಣ ತೆಗೆದುಕೊಂಡು ಮನೆ ಹಂಚಿಕೆ ಮಾಡಿದ್ದರೆ ತಿಳಿಸಿ, ಅಂಥವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ನಾನು ಹೇಳಿದ್ದೇನೆ. ನನ್ನದು ಐಫೋನ್, ಇದರಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳಲು ಆಗುವುದಿಲ್ಲ. ಅವರೇ ರೆಕಾರ್ಡ್ ಮಾಡಿ ಲೀಕ್ ಮಾಡಿರುವುದು ಸಂಪೂರ್ಣ ಅನೈತಿಕ. ಸಚಿವ ಜಮೀರ್ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸರ್ಫರಾಜ್ ಖಾನ್ ತಿಳಿಸಿದ್ದಾರೆ.
ಆಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಮತ್ತು ಸಚಿವ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ನಡುವೆ ಮೊಬೈಲ್ ಫೋನ್ ಮೂಲಕ ನಡೆದ ಮಾತುಕತೆಯಲ್ಲಿ ಲಂಚದ ವಿಚಾರ ಪ್ರಸ್ತಾಪವಾಗಿತ್ತು. ಹಣ ನೀಡಿದವರಿಗಷ್ಟೇ ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬಿ.ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಆಳಂದ ಮತ ಕ್ಷೇತ್ರದ ಹಲವೆಡೆ ಲಂಚ ಪಡೆದು ಮನೆ ಹಂಚಿಕೆ ಮಾಡಲಾಗಿದೆ. ಅಫಜಲಪುರ ಕ್ಷೇತ್ರದಲ್ಲಿಯೂ ಹಣ ಪಡೆದೇ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿ.ಆರ್ ಪಾಟೀಲ್ ಆರೋಪ ಮಾಡಿದ್ದರು.
ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.


