ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಇಷ್ಟು ದಿನ ಏನಾಯ್ತು ಆಯ್ತು, ಯಾರಿಗೆ ಏನು ಬೇಕೋ ಅದನ್ನು ಮಾಡಿಕೊಂಡರು. ಇನ್ನುಮುಂದೆಯಾದರೂ ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಹುದ್ದೆಗಳನ್ನು ನೀಡಿ" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿ.ಕೆ. ಹರಿಪ್ರಸಾದ್ ಅವರ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ನಾಯಕತ್ವಕ್ಕೆ ನೇರವಾಗಿಯೇ ಕಿವಿಮಾತುಗಳನ್ನು ಹೇಳಿದರು.
"ಭಿನ್ನಾಭಿಪ್ರಾಯ ಏನೇ ಇದ್ದರೂ ಒಳಗೆ ಕುಳಿತು ಬಗೆಹರಿಸಿಕೊಳ್ಳಿ":
ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ಅವರಿಗೆ ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ ಖರ್ಗೆ, "ನಿಮ್ಮಿಬ್ಬರ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ. ನಿಮ್ಮ ಭಿನ್ನಮತ ಇಡೀ ಪಾರ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಎಐಸಿಸಿಗೆ ಕೆಟ್ಟ ಹೆಸರು ತರಬೇಡಿ" ಎಂದು ಎಚ್ಚರಿಸಿದರು. ಅಲ್ಲದೆ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಿಭಾಯಿಸಿದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಶ್ಲಾಘಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಆಕ್ರೋಶದ ಬಾಣಗಳು:
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದುದ್ದಕ್ಕೂ ಕೇಂದ್ರದ ಬಿಜೆಪಿ ಸರ್ಕಾರ, ಪ್ರಧಾನಿ ಮೋದಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ ಮಯವಾಗ್ತಿದೆ ಶಿಕ್ಷಣ ಕ್ಷೇತ್ರ: "ರಾಜಕೀಯ ಹಿಡಿತ ಸಾಧಿಸಲು ಶಿಕ್ಷಣ ಸಂಸ್ಥೆಗಳಿಗೆ ಆರ್ಎಸ್ಎಸ್ ಹಿನ್ನೆಲೆಯುಳ್ಳವರನ್ನು ಶಿಕ್ಷಕರನ್ನಾಗಿ ಮತ್ತು ವೈಸ್ ಚಾನ್ಸಲರ್‌ಗಳನ್ನಾಗಿ ನೇಮಿಸಲಾಗುತ್ತಿದೆ."
ರಾಮ ಮಂದಿರದ ಹೆಸರಲ್ಲಿ ಲೂಟಿ: "ಹಿಂದೆ ರಾಮ ಮಂದಿರ ರಥಯಾತ್ರೆ ವೇಳೆ ಜನ ನೀಡಿದ ಇಟ್ಟಿಗೆ, ಬಂಗಾರ, ದುಡ್ಡಿಗೆ ಲೆಕ್ಕವೇ ಇಲ್ಲ. ಈಗ ರಾಮ ಮಂದಿರದ ಹುಂಡಿ ದುಡ್ಡನ್ನೂ ಇವರ ಶಿಷ್ಯರು ಲೂಟಿ ಮಾಡುತ್ತಿದ್ದಾರೆ. ಇದರ ವಿರುದ್ಧ ಎಸ್‌ಐಟಿ ತನಿಖೆಯಾಗಬೇಕು."
ವಿದೇಶಿ ನೀತಿ ವಿಫಲ: "ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ನನ್ನ ಗೆಳೆಯ ಎನ್ನುತ್ತಾ ದೇಶದ ವಿದೇಶಿ ನೀತಿಯನ್ನೇ ಹಾಳುಗೆಡವಿದರು. ಟ್ರಂಪ್ ನೀತಿಗಳಿಂದಲೇ ಇಂದು ಡೀಸೆಲ್- ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ."
"ನೀಟ್ ಪರೀಕ್ಷೆ ರದ್ದು ಮಾಡಿ, ರಾಜ್ಯಗಳಿಗೆ ಅಧಿಕಾರ ಕೊಡಿ":
ನೀಟ್ ಪರೀಕ್ಷೆ ಹಗರಣದ ಕುರಿತು ಪ್ರಸ್ತಾಪಿಸಿದ ಖರ್ಗೆ, "ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೋಸ ಮಾಡಿದ್ದಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು. ನೀಟ್ ಬದಲಿಗೆ ಪ್ರತಿ ರಾಜ್ಯಕ್ಕೂ ಪರೀಕ್ಷೆ ನಡೆಸುವ ಸ್ವಾತಂತ್ರ್ಯ ನೀಡಬೇಕು. ಪಿಯುಸಿ ಮತ್ತು ಸಿಇಟಿ ಮಾದರಿಯಲ್ಲೇ ರ‍್ಯಾಂಕ್ ನೀಡಿದರೆ ಯಾರಿಗೂ ಅನ್ಯಾಯವಾಗುವುದಿಲ್ಲ" ಎಂದು ಆಗ್ರಹಿಸಿದರು.
ಗ್ಯಾರಂಟಿ ರಕ್ಷಣೆಗೆ ನಾವೆಲ್ಲ ಒಗ್ಗಟ್ಟಾಗಬೇಕು: ಸುರ್ಜೇವಾಲ ಕರೆ:
ಇದೇ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, "ಬಿಜೆಪಿಗೆ ಅಧಿಕಾರ ಸಿಕ್ಕರೆ ಅವರು ಬಡವರ ಗ್ಯಾರಂಟಿ ಯೋಜನೆಗಳನ್ನು ಕಿತ್ತುಹಾಕುತ್ತಾರೆ. ಅಷ್ಟೇ ಅಲ್ಲದೆ, ಗ್ಯಾರಂಟಿ ಫಲಾನುಭವಿಗಳಾದ ಕೋಟ್ಯಂತರ ಮಹಿಳೆಯರ ಮೇಲೆ ಬಿಜೆಪಿ ಹಲ್ಲೆ ಮಾಡುತ್ತಿದೆ. ಇವರ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕಿದೆ" ಎಂದರು.
ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತ ಮತ್ತು ಒಬಿಸಿ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಕೆ. ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮೇಲಿನ ಜವಾಬ್ದಾರಿ ಈಗ ದ್ವಿಗುಣಗೊಂಡಿದೆ ಎಂದು ನೆನಪಿಸಿದರು.



