ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಿಂದೂಪುರ ಯಲಹಂಕ ನಡುವೆ ಇರುವ ರಾಜ್ಯ ಹೆದ್ದಾರಿಯ ಮಾಕಳಿ ಮೇಲಿನ ನಾಯಕರಂಡ ಹಳ್ಳಿ ಮಧ್ಯ ಸಂಭವಿಸಿದ ಕಾರು ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿಗಳು ಇನೋವಾ ಕಾರಿನಲ್ಲಿ ಗೌರಿಬಿದನೂರು ಮೂಲಕ ಮಂಚೇನಹಳ್ಳಿ ಹೋಬಳಿಯ ಭೀಮೇಶ್ವರನ ಬೆಟ್ಟಕ್ಕೆ ತೆರಳುವ ವೇಳೆ ನಾಯಕರಂಡ ಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ದೇವರಾಜ ನಗರ ನಿವಾಸಿ ಈಶ್ವರಪ್ಪ, ಕರೇನಹಳ್ಳಿ ನಿವಾಸಿ ಕಾಳಪ್ಪ, ಗೋಪಿನಾಥ್, ಗ್ರೀನ್ ವ್ಯಾಲಿ ನಿವಾಸಿ ಪುರುಷೋತ್ತಮ್, ನರಸಿಂಹ ಮೂರ್ತಿ ಎಂದು ಗುರುತಿಸಲಾಗಿದೆ.
ಎಂಟು ಜನ ಇನೋವಾ ಕಾರಿನಲ್ಲಿ ಭೀಮೇಶ್ವರನ ಬೆಟ್ಟಕ್ಕೆ ತೆರಳುವ ವೇಳೆ ನಾಯಕರಂಡ ಹಳ್ಳಿ ಬಳಿಯ ತಿರುವಿನಲ್ಲಿ ಮುಂದಿದ್ದ ವಾಹನವನ್ನು ಹಿಂದಿಕ್ಕುವ ಆತುರದಲ್ಲಿ ಎದುರಗಡೆ ಬಂದ ಬಸ್ಸನ್ನು ನಿರೀಕ್ಷಿಸದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದದ್ದು ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಡಿವೈಎಸ್ಪಿ ಪಿ.ರವಿ, ಗ್ರಾಮಾಂತರ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಸ್ಥಳಕ್ಕೆ ಭೇಟಿ ನೀಡಿ ಪ್ರಕಾರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.


