ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎಲೆಕ್ಟ್ರಿಕಲ್, ಪ್ಲಂಬಿಂಗ್, ಬ್ಯೂಟಿ ವೆಲ್ನೆಸ್ ಹಾಗೂ ಕೃಷಿಯಂತಹ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ. ಈರಣ್ಣ, "ಎಸ್ಎಸ್ಎಲ್ಸಿ ಮತ್ತು ಪಿಯು ಹಂತದಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳು ಶಿಕ್ಷಣ ತೊರೆಯುತ್ತಿದ್ದಾರೆ ಎಂಬ ನೆಪವೊಡ್ಡಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬಡಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಬದಲು, ಕೌಶಲ್ಯದ ಹೆಸರಿನಲ್ಲಿ ಅವರನ್ನು ಶೈಕ್ಷಣಿಕ ಮುಖ್ಯವಾಹಿನಿಯಿಂದ ದೂರ ತಳ್ಳುವ ಹುನ್ನಾರ ಇದರಲ್ಲಿದೆ" ಎಂದು ಆರೋಪಿಸಿದ್ದಾರೆ.
"ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿಜ್ಞಾನ, ಗಣಿತ ಕಲಿತು ಉನ್ನತ ಶಿಕ್ಷಣಕ್ಕೆ ಸಜ್ಜಾದರೆ, ಬಡಮಕ್ಕಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ಕಾರ್ಮಿಕರನ್ನಾಗಿ ಸಿದ್ಧಪಡಿಸಲು ಸರ್ಕಾರ ಹೊರಟಿದೆ. ಎಡಿಬಿಯಿಂದ ಪಡೆದ 2,000 ಕೋಟಿ ರೂ. ಸಾಲದ ಕರಾರುಗಳ ಭಾಗವಾಗಿ ಹಾಗೂ ಹಿಂದಿನ ಸರ್ಕಾರದ ಎನ್ಇಪಿ-2020 ನೀತಿಯನ್ನೇ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ, ಸಿ.ವಿ. ರಾಮನ್ ಅವರಂತಹ ಮಹಾನ್ ಸಾಧಕರಿಗೆ ಶಾಲೆಯಲ್ಲಿ ಯಾವ ವೃತ್ತಿಪರ ಕೌಶಲ್ಯ ನೀಡಲಾಗಿತ್ತು?" ಎಂದು ಅವರು ಪ್ರಶ್ನಿಸಿದ್ದಾರೆ.
ಕೂಡಲೇ ಸರ್ಕಾರ ಈ ಬಡಜನ ವಿರೋಧಿ ನಡೆಯನ್ನು ಕೈಬಿಟ್ಟು ನೈಜ ಶಿಕ್ಷಣಕ್ಕೆ ಒತ್ತು ನೀಡಬೇಕು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಒಗ್ಗೂಡಿ 'ಸಾರ್ವಜನಿಕ ಶಿಕ್ಷಣ ಉಳಿಸಿ' ಹೋರಾಟವನ್ನು ಬಲಪಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.




