ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವಿರುದ್ಧ ತೀವ್ರ ವಾಗ್ದಾಳಿ ಮುಂದುವರಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬೆಂಗಳೂರಿನಿಂದ ಆರ್ಎಸ್ಎಸ್ ಹಾಗೂ ಬಿಜೆಪಿಯವರನ್ನು ಓಡಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವುದು ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಯ ಕುರಿತು ಮಾತನಾಡಿ, "ವಂದೇ ಮಾತರಂ ನಮ್ಮ ಪಕ್ಷದವರು ಚೆನ್ನಾಗಿ ಹಾಡುತ್ತಾರೆ, ವಂದೇ ಮಾತರಂ ಏನಿದ್ರು ನಮ್ಮದು" ಎಂದು ಪ್ರತಿಪಾದಿಸಿದರು. ಅಲ್ಲದೆ, ವಿರೋಧಿಗಳನ್ನು ವ್ಯಂಗ್ಯವಾಡಿ, "ನೀವು ಖಾಕಿ ಚಡ್ಡಿ, ದೊಣ್ಣೆ ಹಿಡಿದು ಸಂಜೆ ಹೋಗಿ" ಎಂದು ಟೀಕಿಸಿದರು.
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕವಚನದಲ್ಲಿ ಆಕ್ರೋಶ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿ.ಕೆ. ಹರಿಪ್ರಸಾದ್, ಅವರನ್ನು ಏಕವಚನದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಸಿಇಸಿ ಜ್ಞಾನೇಶ್ ಕುಮಾರ್ ಒಬ್ಬ ಅಜ್ಞಾನಿ. ಜ್ಞಾನೇಶ್ ಕುಮಾರ್ ಹೋಗುವ ತನಕ ಹೋರಾಟ ಮಾಡಿ. ಅವನ ಬಗ್ಗೆ ನಿರ್ಲಕ್ಷ್ಯವಹಿಸಿದ್ರೆ, ಅರ್ಹ ಮತದಾರರನ್ನು ಕೈಬಿಡ್ತಾನೆ. ಅವನಂತಹ ನೀಚ ಈ ದೇಶದಲ್ಲಿ ಬೇರೆ ಯಾರೂ ಸಹ ಇಲ್ಲ. ಸಂವಿಧಾನ ದುರುಪಯೋಗ ಮಾಡಿಕೊಂಡ ನೀಚ ಅವನು. ನೀವೆಲ್ಲ ಮತದಾರರ ಪಟ್ಟಿಯ ಬಗ್ಗೆ ಎಚ್ಚರಿಕೆ ವಹಿಸಬೇಕು" ಎಂದು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಆಯೋಗದ ನಿರ್ಧಾರಗಳ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರತಿಭಟನೆ ಹಾಗೂ ರಾಜಕೀಯ ಚಟುವಟಿಕೆಗಳ ನಡುವೆ ಹರಿಪ್ರಸಾದ್ ಅವರ ಈ ವಿವಾದಾತ್ಮಕ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿವೆ.




