ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಹೇಮದಳ ಗ್ರಾಮದಲ್ಲಿ ವಿಶ್ವಮಾನವ ಸೇವಾಶ್ರಮದ ಸಂಯೋಗದೊಂದಿಗೆ ಶ್ರೀ ಕಾರ್ತಕಾತ್ಯಾಯಿನಿ ದೇವಿಯ ವಾರ್ಷಿಕೋತ್ಸವ ಹಾಗೂ ಆಯುಷ್ ಇಲಾಖೆ ವತಿಯಿಂದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಮೇ- 15 ರಂದು ಶುಕ್ರವಾರ ಬೆಳಿಗ್ಗೆ 9-30ಕ್ಕೆ ಧಾರ್ಮಿಕ ಕಾರ್ಯಕ್ರಮ, ಆರೋಗ್ಯ ಶಿಬಿರ ಬೆಳಿಗ್ಗೆ 10.30 ರಿಂದ ಆರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಧಾರ್ಮಿಕ ಮಹೋತ್ಸವ:
ಹೇಮದಳ ಗ್ರಾಮದಲ್ಲಿ ಶ್ರೀ ಕಾರ್ತಕಾತ್ಯಾಯಿನಿ ದೇವಿಯ ವಾರ್ಷಿಕೋತ್ಸವ ಮಹೋತ್ಸವವು ಅತ್ಯಂತ ಸಡಗರದಿಂದ ನಡೆಯಲಿದ್ದು, ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.
ಉಚಿತ ಆಯುರ್ವೇದ ಹಾಗೂ ಆರೋಗ್ಯ ಶಿಬಿರ:
ಚಿತ್ರದುರ್ಗದ ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದ ವಿಶೇಷತೆಗಳೆಂದರೆ, ಗ್ಯಾಸ್ಟ್ರಿಕ್, ಮಧುಮೇಹ (ಶುಗರ್), ರಕ್ತದೊತ್ತಡ (ಬಿ.ಪಿ), ಕೀಲು ನೋವು ಹಾಗೂ ಚರ್ಮದ ಕಾಯಿಲೆ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಗೆ ಪರಿಣಿತ ವೈದ್ಯರಿಂದ ತಪಾಸಣೆ ನಡೆಯಲಿದೆ.
ಶಿಬಿರದಲ್ಲಿ ತಪಾಸಣೆಗೊಳಗಾದವರಿಗೆ ಉಚಿತವಾಗಿ ಆಯುರ್ವೇದ ಔಷಧಿಗಳನ್ನು ವಿತರಿಸಲಾಗುವುದು. ಆರೋಗ್ಯ ಇಲಾಖೆಯ ವತಿಯಿಂದ ಎಲ್ಲರಿಗೂ ಉಚಿತವಾಗಿ ಬಿ.ಪಿ ಮತ್ತು ಶುಗರ್ ಪರೀಕ್ಷೆ ಮಾಡಲಾಗುವುದು.
ಈ ಶಿಬಿರದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ರಘುವೀರ ಆರ್., ನಾಗಸಮುದ್ರದ ವೈದ್ಯಾಧಿಕಾರಿ ಡಾ. ಚಂದ್ರಕಾಂತ್ ಹಾಗೂ ಡಾ. ಪ್ರಭು ಎಂ.ಎಸ್. ಅವರು ಆಗಮಿಸಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಿದ್ದಾರೆ.
ಶಿಬಿರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.ವಿಶ್ವಮಾನವ ಸೇವಾಶ್ರಮ ಹಾಗೂ ಹೇಮದಳ ಗ್ರಾಮಸ್ಥರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


