ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ತೋಟಗಾರಿಕೆ ಇಲಾಖೆಯ ವತಿಯಿಂದ ೨೦೨೫-೨೬ನೇ ಸಾಲಿನ ಎಂಐಡಿಹೆಚ್ ಯೋಜನೆಯಡಿ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಮಾಡುವ ಔಷಧಿಯನ್ನು ಖರೀದಿಸಿದ್ದಕ್ಕಾಗಿ ಶೇ.೩೦ ರಷ್ಟು ಸಹಾಯಧನವನ್ನು ಕುಟುಂಬದಲ್ಲಿ ಓರ್ವ ಸದಸ್ಯನಿಗೆ ಮಾತ್ರ ನೀಡಲಾಗುವುದು.
ಈ ಸಂಬಂಧ ಫಲಾನುಭವಿಗಳು ಖರೀದಿಸಿದ ಮೈಲುತುತ್ತಾ, ಪ್ರೊಪಿಕೊನಜೋಲ್, ಹೆಕ್ಸಕೊನಜೋಲ್, ಸಾಫ್ ಮತ್ತಿತರ ಶಿಫಾರಸ್ಸು ಮಾಡಿದ ಔಷಧಿಯನ್ನು ಖರೀದಿಸಬಹುದು. ಈ ಕಾರ್ಯಕ್ರಮಕ್ಕೆ ಇಲಾಖೆಯಿಂದ ಪಡೆದ ಅರ್ಜಿಗಳನ್ನು ಭರ್ತಿ ಮಾಡಿ ಜುಲೈ ೮ರೊಳಗೆ ಸಲ್ಲಿಸಬಹುದು.
ಅರ್ಜಿಯೊಂದಿಗೆ ಪಹಣಿ (ಪಹಣಿಯಲ್ಲಿ ಅಡಿಕೆ ನಮೂದಾಗದಿದ್ದಲ್ಲಿ ಬೆಳೆ ದೃಢೀಕರಣ), ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಜಿ.ಎಸ್.ಟಿ. ನಮೂದಾಗಿರುವ ಔಷಧಿ ಖರೀದಿಸಿದ ಬಿಲ್, ಪ.ಜಾತಿ, ಪ.ಪಂಗಡದ ಫಲಾನುಭವಿಗಳು ಇತ್ತೀಚಿನ ಆರ್.ಡಿ. ನಂಬರ್ ಇರುವ ಜಾತಿ ಪ್ರಮಾಣ ಪತ್ರದ ನಕಲು, ಜಂಟಿ ಖಾತೆ ಇದ್ದಲ್ಲಿ ೧೦೦ ರೂ.ಗಳ ಬಾಂಡ್ ಪೇಪರ್‌ನಲ್ಲಿ ಒಪ್ಪಿಗೆ ಪತ್ರ, ಕುಟುಂಬದಿಂದ ಬೇರ್ಪಟ್ಟಿದ್ದರೆ ಪಡಿತರ ಚೀಟಿಯ ಪ್ರತಿಯನ್ನು ಸಲ್ಲಿಸಬೇಕು ಎಂದು ತೋಟಗಾರಿಕೆ ಉಪ ನಿರ್ದೇಶಕಿ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


