ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿ ಆಡಳಿತ ಪಕ್ಷದೊಳಗಿನ ಅತೃಪ್ತಿ ಮತ್ತು ನಾಯಕತ್ವ ಬದಲಾವಣೆ ಹೇಳಿಕೆ ಕುರಿತು ಚರ್ಚಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ ಅವರು, ಮಾಧ್ಯಮದಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ಅದೆಲ್ಲವೂ ನಿಮ್ಮ ಕಲ್ಪನೆ ಮಾತ್ರ ಎಂದರು.
ಪಕ್ಷದ ಶಾಸಕರ ಭೇಟಿ ನಿರಂತರ ಪ್ರಕ್ರಿಯೆ ನೀಡಿದ ಅವರು, ಇದು ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ನಡೆಯಲಿದೆ. ಈ ಸಮಯದಲ್ಲಿ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಸ್ಥರನ್ನು ಭೇಟಿ ಮಾಡುತ್ತೇನೆ. ಬಳಿಕ ಸಿಎಂ ಹಾಗೂ ಡಿಸಿಎಂ ಜೊತೆಗೂ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತೇವೆ ಎಂದು ಸುರ್ಜೆವಾಲಾ ತಿಳಿಸಿದರು.
ಕಾಂಗ್ರೆಸ್ ಸಂಘಟನೆ ಅವರವರ ಕ್ಷೇತ್ರದಲ್ಲಿ ಹೇಗಿದೆ ಎಂಬ ವರದಿ ಪಡೆಯುತ್ತಿದ್ದೇವೆ. ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ರಿವ್ಯೂ ಮಾಡುತ್ತಿದ್ದೇವೆ. ಎಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದರು.
ಸಿಎಂ ಹಾಗೂ ಸಚಿವರಿಗೆ ಇದರಿಂದ ಮಾಹಿತಿ ನೀಡಲು ಹಾಗೂ ಅರ್ಥ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.


