ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿಸಿ ರೈತರು ಬುಧವಾರ ದೇವನಹಳ್ಳಿ ಚಲೋ ನಡೆಸಲು ಮುಂದಾಗಿದ್ದು ರೈತರ ಪ್ರತಿಭಟನೆ ಹಿನ್ನೆಲೆ ದೇವನಹಳ್ಳಿ ತಹಶೀಲ್ದಾರ್ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೈಗಾರಿಕೆಗಳ ಸ್ಥಾಪನೆಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ರೈತರ ಫಲವತ್ತಾದ ಭೂಮಿಯನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ರೈತರು ಈ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಕಳೆದ 1,180 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್. ಮುನಿಯಪ್ಪ ಅವರುಗಳು ಜೂ.24 ರಂದು ರೈತರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮನವೊಲಿಕೆ ಮಾಡಲು ಪ್ರಯತ್ನಿಸಿದ್ದು, ಸಭೆಯಲ್ಲಿ 1,777 ಎಕರೆ ಪೈಕಿ 500 ಎಕರೆ ಕೈ ಬಿಡುವುದಾಗಿ ಹೇಳಿದ್ದರು. ಆದರೆ ರೈತರು ಮಾತ್ರ ಇದು ಮೂಗಿಗೆ ತುಪ್ಪ ಸವರುವ ಕ್ರಮ ಅಷ್ಟೇ. ಈ ನಿರ್ಧಾರಕ್ಕೆ ನಮ್ಮ ಸಮ್ಮತಿ ಇಲ್ಲಾ ಎಂದು ಹೇಳಿದರಲ್ಲದೆ ಮತ್ತೊಷ್ಟು ಹೋರಾಟ ಚುರುಕುಗೊಳಿಸಲಾಗುತ್ತದೆ ಎಂದಿದ್ದರು.
ಭೂ ಸ್ವಾಧೀನ ವಿರೋಧಿ ಹೋರಾಟಗಾರರು ದೇವನಹಳ್ಳಿ ಚಲೋ ಎಂಬ ಶಿರ್ಷಿಕೆಯಡಿ ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ನೂರಾರು ರೈತರು ಭಾಗವಹಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಬೆಳಗ್ಗೆಯಿಂದ ರೈತರು ಗುಂಪು ಗುಂಪಾಗಿ ದೇವನಹಳ್ಳಿಯತ್ತ ಬರುತ್ತಿದ್ದಾರೆ. ರೈತರ ದೇವನಹಳ್ಳಿ ಚಲೋ ಹೋರಾಟ ಹಿನ್ನೆಲೆ ಮಾಧ್ಯಮದೊಂದಿಗೆ ಮಾತನಾಡಿದ ದೇವನಹಳ್ಳಿ ತಹಶೀಲ್ದಾರ್ ಹೆಚ್.ಬಾಲಕೃಷ್ಣನ್, ಸಾರ್ವಜನಿಕರಿಗೆ ಇವತ್ತು ಮಿನಿ ವಿಧಾನಸೌಧಕ್ಕೆ ಬರಬಾರದು ಎಂದು ಮನವಿ ಮಾಡಲಾಗಿದೆ. ಚನ್ನರಾಯಪಟ್ಟಣ ಜಮೀನು ಭೂ ಸ್ವಾಧೀನ ವಿರೋಧಿಸಿ ರೈತರು ಚಳವಳಿ ನಡೆಸುತ್ತಿದ್ದಾರೆ. ಈ ಸಂಬಂಧ ಮಂಗಳವಾರ ರಾತ್ರಿ 8ಗಂಟೆ ವರೆಗೂ ರೈತರ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ರೈತರು ಈಗ ಹಳೆ ಬಸ್ ಸ್ಟ್ಯಾಂಡ್ ಸಮೀಪ ಪ್ರತಿಭಟಿಸಲು ನಿರ್ಧಾರ ಮಾಡಿದ್ದಾರೆ. ಬಿಗಿ ಬಂದೋಬಸ್ತ್ ಮಾಡಿದ್ದರೂ ನೂಕು ನುಗ್ಗಲು ಉಂಟಾಗಿ ತೊಂದರೆ ಆಗಬಾರದು ಅನ್ನೋ ಉದ್ದೇಶದಿಂದ ಸಾರ್ವಜನಿಕರಿಗೆ ಬರಬೇಡಿ ಅಂತ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ನನಗೆ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಎಚ್ಚರಿಕೆ ವಹಿಸಿದ್ದೇವೆ ಎಂದು ತಹಶೀಲ್ದಾರ್ ತಿಳಿಸಿದರು.


