ಚಂದ್ರವಳ್ಳಿ ನ್ಯೂಸ್, ಮೈಸೂರು:
"ತಂತ್ರಜ್ಞಾನ ಬದುಕಿಗೆ ಬೆಳಕು ಮತ್ತು ಸೌಲಭ್ಯ ನೀಡುವ ಸಾಧನ. ಆದರೆ ಅದರ ಅತಿರೇಕದ ಬಳಕೆ ಮನಸ್ಸಿನ ನೆಮ್ಮದಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರಬಹುದು. ಆದ್ದರಿಂದ ತಂತ್ರಜ್ಞಾನವನ್ನು ವಿವೇಕದಿಂದ ಬಳಸಿಕೊಂಡು, ಮಾನವೀಯತೆ ಮತ್ತು ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಬೇಕು."
ತಂತ್ರಜ್ಞಾನ ಜಾಣತನದಿ ಬಳಸು
ಜ್ಞಾನದ ದೀಪವನು ಹಚ್ಚು
ಪ್ರೀತಿಯ ಬಂಧವನು ಬೆಳೆಸು
ನೆಮ್ಮದಿಯ ಬದುಕನು ಕಟ್ಟು.
ತಂತ್ರಜ್ಞಾನ ಜ್ಞಾನಕ್ಕೆ ದಾರಿಯಾಗಲಿ, ದ್ವೇಷಕ್ಕೆ ಕಾರಣವಾಗದಿರಲಿ. ವಿವೇಕದಿಂದ ಬಳಸಿದ ತಂತ್ರಜ್ಞಾನ ಬದುಕನ್ನು ಬೆಳೆಸುತ್ತದೆ, ಅಜಾಗರೂಕತೆ ಅದನ್ನೇ ಕೆಡಿಸುತ್ತದೆ. ಬದಲಾಗು ಮಾನವ, ಆದರೆ ನಿನ್ನ ಬದುಕಿನ ನೆಮ್ಮದಿಯನ್ನೇ ಹಾಳುಮಾಡಿಕೊಳ್ಳುವಂತೆ ಬದಲಾಗಬೇಡ. ಇರುವ ನೆಮ್ಮದಿಗೆ ಬೆಂಕಿ ಹಚ್ಚಿ, ತಾನೇ ತಾನು ಪತನವಾಗುವುದೇಕೆ? ಜೋಕೆ, ಬಾಳಿ ಬದುಕು. ಈ ಭೂಮಿಯಲ್ಲಿ ನೀನು ಶಾಶ್ವತ ನಿವಾಸಿಯಲ್ಲ, ಬಾಡಿಗೆಗೆ ಬಂದಿರುವ ಉಸಿರು ಮಾತ್ರ. ಆದ್ದರಿಂದ ಕೆಸರನ್ನು ಬಿಟ್ಟು ಹೆಸರು ಮಾಡಿ ಹೋಗು, ಹೊಲಸು ಹರಡಿ ಹುಚ್ಚಾಟವಾಡುತ್ತಾ ಮಣ್ಣಾಗುವುದೇಕೆ? ಬದುಕಿರುವಷ್ಟು ಕಾಲ ಬದುಕಿಗೆ ಬೆಳಕಾಗು, ಸಮಾಜಕ್ಕೆ ನೆಮ್ಮದಿಯಾಗು.
ತಂತ್ರಜ್ಞಾನ ಮಾನವ ಬದುಕಿಗೆ ದೊರೆತಿರುವ ಮಹತ್ವದ ಸಾಧನ. ದೂರದಲ್ಲಿರುವವರನ್ನು ಹತ್ತಿರ ತಂದಿದೆ. ಜ್ಞಾನವನ್ನು ಬೆರಳ ತುದಿಗೆ ತಂದಿದೆ. ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿದೆ. ರೈತರಿಗೆ ಹವಾಮಾನ ಮಾಹಿತಿ, ಮಾರುಕಟ್ಟೆ ಬೆಲೆ ಮತ್ತು ಕೃಷಿ ಸಲಹೆಗಳನ್ನು ತಲುಪಿಸುತ್ತಿದೆ. ವ್ಯಾಪಾರ, ಉದ್ಯೋಗ, ಬ್ಯಾಂಕಿಂಗ್, ಆಡಳಿತ, ಸಂವಹನ, ಸಂಶೋಧನೆ ಹೀಗೆ ಬದುಕಿನ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ವೇಗ ಮತ್ತು ಅನುಕೂಲವನ್ನು ತಂದಿದೆ. ಹೀಗಾಗಿ ತಂತ್ರಜ್ಞಾನವನ್ನು ವಿರೋಧಿಸುವುದು ಕಾಲದ ವಾಸ್ತವವನ್ನು ನಿರಾಕರಿಸುವಂತಾಗುತ್ತದೆ. ಪ್ರಶ್ನೆ ತಂತ್ರಜ್ಞಾನದಲ್ಲಿಲ್ಲ. ಅದನ್ನು ನಾವು ಯಾವ ಉದ್ದೇಶಕ್ಕೆ, ಎಷ್ಟು ಮಿತಿಯಲ್ಲಿ ಮತ್ತು ಯಾವ ಮನೋಭಾವದಿಂದ ಬಳಸುತ್ತಿದ್ದೇವೆ ಎಂಬುದರಲ್ಲಿದೆ.
ಒಳ್ಳೆಯ ಬುದ್ಧಿಗೆ ತಂತ್ರಜ್ಞಾನ ಜ್ಞಾನದ ದಾರಿ. ಕೆಟ್ಟ ಬುದ್ಧಿಗೆ ಅದೇ ಸಾಧನ ದುರുപಯೋಗದ ದಾರಿ. ಜ್ಞಾನ ಹಂಚಬೇಕಾದ ಪರದೆ ದ್ವೇಷ ಹಂಚುವ ವೇದಿಕೆಯಾಗಬಾರದು. ಸಂಪರ್ಕ ಬೆಳೆಸಬೇಕಾದ ಸಾಮಾಜಿಕ ಜಾಲತಾಣಗಳು ಸಂಬಂಧಗಳನ್ನು ಒಡೆಯುವ ಅಂಗಳವಾಗಬಾರದು. ಸತ್ಯವನ್ನು ಹುಡುಕಬೇಕಾದ ಇಂಟರ್ನೆಟ್ ಸುಳ್ಳು, ವದಂತಿ ಮತ್ತು ಪ್ರಚೋದನೆಯ ಮಾರುಕಟ್ಟೆಯಾಗಬಾರದು. ಆದರೆ ಇಂದು ಕೆಲವು ಸಂದರ್ಭಗಳಲ್ಲಿ ತಂತ್ರಜ್ಞಾನದ ಸೌಲಭ್ಯಕ್ಕಿಂತ ಅದರ ಅತಿರೇಕವೇ ಹೆಚ್ಚು ಗೋಚರಿಸುತ್ತಿದೆ. ಕೈಯಲ್ಲಿರುವ ಸಾಧನ ದೊಡ್ಡದಾಗಿಲ್ಲ, ಅದನ್ನು ಬಳಸುವ ಮನಸ್ಸಿನ ನಿಯಂತ್ರಣ ಕಳೆದುಹೋಗಿರುವುದೇ ದೊಡ್ಡ ಅಪಾಯ.
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುದ್ದಿ ಬಂದರೆ ಸಾಕು. ಅದರ ಸತ್ಯಾಸತ್ಯತೆ ಪರಿಶೀಲಿಸುವ ಮುನ್ನವೇ ಹಂಚುವ ಆತುರ. ಒಂದು ವಿಡಿಯೋ ಕಂಡರೆ ಸಂಪೂರ್ಣ ಘಟನೆ ತಿಳಿಯುವ ಮುನ್ನವೇ ತೀರ್ಪು. ಒಂದು ಹೇಳಿಕೆ ಕೇಳಿದರೆ ಅದರ ಹಿನ್ನೆಲೆ ಅರಿಯುವ ಮುನ್ನವೇ ಆಕ್ರೋಶ. ಒಂದು ಚಿತ್ರ ಕಂಡರೆ ಅದರ ಸತ್ಯಾಸತ್ಯತೆ ತಿಳಿಯದೆ ಆರೋಪ. ಹೀಗೆ ಯೋಚಿಸುವುದಕ್ಕಿಂತ ಪ್ರತಿಕ್ರಿಯಿಸುವುದು ವೇಗವಾದಾಗ ಸಮಾಜದ ವಿವೇಕ ನಿಧಾನವಾಗಿ ಹಿಂದೆ ಸರಿಯುತ್ತದೆ. ತಂತ್ರಜ್ಞಾನದ ವೇಗ ಮನುಷ್ಯನ ವಿವೇಕಕ್ಕಿಂತ ಮುಂದೆ ಹೋದಾಗ ಸಮಸ್ಯೆ ಆರಂಭವಾಗುತ್ತದೆ.
ಇದರ ಪರಿಣಾಮ ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗುವುದಿಲ್ಲ. ಅದು ಸಾಮಾಜಿಕ ಸಾಮರಸ್ಯಕ್ಕೂ ತಟ್ಟುತ್ತದೆ. ಅನುಮಾನ, ಅವಮಾನ, ದ್ವೇಷ, ಪ್ರಚೋದನೆ ಮತ್ತು ಕುಮ್ಮಕ್ಕುಗಳಿಗೆ ತಂತ್ರಜ್ಞಾನ ವೇಗ ನೀಡಿದರೆ ಸಣ್ಣ ಘಟನೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಅಥವಾ ಪ್ರದೇಶದ ಕುರಿತು ಅವಹೇಳನಕಾರಿ ಮಾತುಗಳು ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರನ್ನು ತಲುಪಬಹುದು. ಒಂದು ಸುಳ್ಳು ಸುದ್ದಿ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಬಹುದು. ಒಂದು ತಿರುಚಿದ ವಿಡಿಯೋ ಸಮುದಾಯಗಳ ನಡುವೆ ಅನುಮಾನ ಮೂಡಿಸಬಹುದು. ಒಂದು ಪ್ರಚೋದನಕಾರಿ ಸಂದೇಶ ಶಾಂತ ಪರಿಸ್ಥಿತಿಯನ್ನೇ ಉದ್ವಿಗ್ನಗೊಳಿಸಬಹುದು.
ಇಲ್ಲಿ ತಂತ್ರಜ್ಞಾನ ಅಪರಾಧಿ ಅಲ್ಲ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಮನೋಭಾವವೇ ಪ್ರಶ್ನೆಗೆ ಒಳಗಾಗಬೇಕು. ಚಾಕು ಅಡುಗೆಗೂ ಬಳಕೆಯಾಗುತ್ತದೆ, ಗಾಯಕ್ಕೂ ಬಳಕೆಯಾಗುತ್ತದೆ. ಅದಕ್ಕಾಗಿ ಚಾಕುವನ್ನೇ ದೋಷಿ ಮಾಡಲಾಗುವುದಿಲ್ಲ. ಅದನ್ನು ಬಳಸುವ ಉದ್ದೇಶ ಮುಖ್ಯ. ಅದೇ ರೀತಿ ತಂತ್ರಜ್ಞಾನ ಜ್ಞಾನಕ್ಕೂ ಬಳಕೆಯಾಗಬಹುದು, ವಂಚನೆಗೂ ಬಳಕೆಯಾಗಬಹುದು. ಶಿಕ್ಷಣಕ್ಕೂ ಬಳಕೆಯಾಗಬಹುದು, ದ್ವೇಷಕ್ಕೂ ಬಳಕೆಯಾಗಬಹುದು. ಸಮಾಜವನ್ನು ಜೋಡಿಸುವ ಸೇತುವೆಯಾಗಬಹುದು, ವಿಭಜಿಸುವ ಗೋಡೆಯಾಗಬಹುದು. ಆಯ್ಕೆ ನಮ್ಮ ಕೈಯಲ್ಲಿದೆ.
ಇಂದು ತಂತ್ರಜ್ಞಾನದ ಅತಿರೇಕ ಮತ್ತೊಂದು ರೀತಿಯ ಅಪಾಯವನ್ನೂ ತಂದಿದೆ. ಗಮನ ಸೆಳೆಯಲು ಅಪಾಯಕಾರಿ ಆಟೋಟಗಳು, ಸಾರ್ವಜನಿಕ ಸ್ಥಳಗಳಲ್ಲಿ ಅಶಿಸ್ತಿನ ವರ್ತನೆ, ಅಪಘಾತಗಳ ಸಂದರ್ಭದಲ್ಲಿ ನೆರವು ನೀಡುವುದಕ್ಕಿಂತ ವಿಡಿಯೋ ಮಾಡುವ ಮನೋಭಾವ, ಖಾಸಗಿ ಬದುಕನ್ನು ಪ್ರದರ್ಶನದ ವಸ್ತುವನ್ನಾಗಿ ಮಾಡುವುದು ಮತ್ತು ಕ್ಷಣಿಕ ಪ್ರಸಿದ್ಧಿಗಾಗಿ ಯಾವುದೇ ಮಿತಿಯನ್ನೂ ಮೀರುವ ಪ್ರವೃತ್ತಿ ಹೆಚ್ಚುತ್ತಿದೆ. ಮನುಷ್ಯನ ನೋವು ಕೆಲವೊಮ್ಮೆ ಸಹಾನುಭೂತಿಯ ವಿಷಯವಾಗುವುದಕ್ಕಿಂತ ದೃಶ್ಯವಸ್ತುವಾಗುತ್ತಿದೆ ಎಂಬುದು ಸಮಾಜದ ಮನಸ್ಸಿಗೆ ಕನ್ನಡಿ ಹಿಡಿಯುವ ಸಂಗತಿ.
ಇದರ ಜೊತೆಗೆ ಕೊಲೆ, ಅತ್ಯಾಚಾರ, ಕಳ್ಳತನ, ಮೋಸ, ವಂಚನೆ ಮುಂತಾದ ಅಪರಾಧಗಳು ಸಮಾಜದ ಭದ್ರತೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತವೆ. ಇಂತಹ ಘಟನೆಗಳ ಕುರಿತು ಜವಾಬ್ದಾರಿಯುತ ಮಾಹಿತಿ ನೀಡುವ ಬದಲು ಸಂಚಲನ ಸೃಷ್ಟಿಸುವ ಪ್ರಯತ್ನ ನಡೆದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಪ್ರತಿಯೊಂದು ಘಟನೆಗೂ ಸಾಮಾಜಿಕ ಮಾಧ್ಯಮದ ತಕ್ಷಣದ ತೀರ್ಪು ಪರಿಹಾರವಲ್ಲ. ತನಿಖೆ, ಸಾಕ್ಷ್ಯ, ಕಾನೂನು ಮತ್ತು ನ್ಯಾಯದ ಪ್ರಕ್ರಿಯೆಗೆ ಗೌರವ ನೀಡುವುದು ನಾಗರಿಕ ಸಮಾಜದ ಲಕ್ಷಣ.
ಸಾಮಾಜಿಕ ಸಾಮರಸ್ಯದ ಸಂಕಷ್ಟಕ್ಕೆ ತಂತ್ರಜ್ಞಾನ ಮಾತ್ರ ಕಾರಣ ಎಂದು ಹೇಳುವುದು ಸರಿಯಲ್ಲ. ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ಸಾಲದ ಒತ್ತಡ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಗಳು, ಬದುಕಿನ ಅನಿಶ್ಚಿತತೆ ಇವೆಲ್ಲವೂ ಜನರ ಮನಸ್ಸಿನಲ್ಲಿ ಒತ್ತಡವನ್ನು ಸೃಷ್ಟಿಸುತ್ತವೆ. ಈ ಒತ್ತಡಕ್ಕೆ ಸೂಕ್ತ ಪರಿಹಾರ ಸಿಗದಾಗ ಭಾವನಾತ್ಮಕ ಪ್ರಚೋದನೆಗಳಿಗೆ ಜನರು ಸುಲಭವಾಗಿ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಸಾಮಾಜಿಕ ಶಾಂತಿಯನ್ನು ಕಾಪಾಡುವುದು ಎಂದರೆ ಕೇವಲ ಗಲಭೆ ತಡೆಯುವುದಲ್ಲ. ಜನರ ಬದುಕಿನ ಮೂಲ ಸಮಸ್ಯೆಗಳನ್ನು ಪರಿಹರಿಸುವುದೂ ಅದರ ಭಾಗವೇ ಆಗಿದೆ.
ಒಳ್ಳೆಯ ಮಾತನು ಆಡು
ಒಗ್ಗಟ್ಟಿನ ದಾರಿಯಲಿ ನಡೆ
ಸಾಮರಸ್ಯದ ಬೀಜವನು ಬಿತ್ತ
ಸಂತಸದ ಬದುಕನು ಕಟ್ಟು
ಇಲ್ಲಿ ಸರ್ಕಾರದ ಜವಾಬ್ದಾರಿ ಮಹತ್ವದ್ದು. ಸಾಮಾಜಿಕ ಸಾಮರಸ್ಯ ಕಾಪಾಡುವುದು ಆಡಳಿತದ ಮೂಲ ಕರ್ತವ್ಯವಾಗಬೇಕು. ಗಲಭೆ, ದ್ವೇಷಪ್ರಚೋದನೆ, ಸುಳ್ಳು ಸುದ್ದಿ, ಹಿಂಸೆಗೆ ಕುಮ್ಮಕ್ಕು ಮತ್ತು ಅಪರಾಧಗಳು ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಅವುಗಳಿಗೆ ಕಾರಣವಾಗುವ ಪರಿಸ್ಥಿತಿಯನ್ನು ಮುಂಚಿತವಾಗಿ ಗುರುತಿಸುವ ಕಾರ್ಯಯೋಜನೆ ಅಗತ್ಯ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪ್ರಚೋದನಕಾರಿ ಮಾಹಿತಿಯ ಮೇಲೆ ಕಾನೂನುಬದ್ಧ ನಿಗಾ, ದೂರುಗಳಿಗೆ ತ್ವರಿತ ಸ್ಪಂದನೆ, ಅಪರಾಧಗಳ ನಿಷ್ಪಕ್ಷಪಾತ ತನಿಖೆ, ತಪ್ಪಿತಸ್ಥರ ವಿರುದ್ಧ ಸಮಯಬದ್ಧ ಕಾನೂನು ಕ್ರಮ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ಜನಸಂವಾದ ಇರಬೇಕು. ಜೊತೆಗೆ ಉದ್ಯೋಗ, ಶಿಕ್ಷಣ, ಆರೋಗ್ಯ, ಬೆಲೆ ಏರಿಕೆ ಮತ್ತು ಆರ್ಥಿಕ ಅಸಮಾನತೆಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬೇಕು. ಗಲಭೆ ನಡೆದಾಗ ಶಾಂತಿ ಕಾಪಾಡುವುದು ಮಾತ್ರ ಸರ್ಕಾರದ ಕರ್ತವ್ಯವಲ್ಲ, ಗಲಭೆ ಹುಟ್ಟದಂತಹ ವಾತಾವರಣ ನಿರ್ಮಿಸುವುದೇ ನಿಜವಾದ ಆಡಳಿತದ ಜವಾಬ್ದಾರಿ.
ರಾಜಕೀಯ ನಾಯಕತ್ವವೂ ಈ ಸಂದರ್ಭದಲ್ಲಿ ಆತ್ಮಪರಿಶೀಲನೆ ಮಾಡಬೇಕಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಇರುವ ರಾಜಕೀಯವು ಜನರ ಭಾವನೆಗಳನ್ನು ಕೆರಳಿಸುವ ಸಾಧನವಾಗಬಾರದು. ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಯಂತಹ ಸೂಕ್ಷ್ಮ ವಿಚಾರಗಳನ್ನು ಮತ, ಅಧಿಕಾರ ಅಥವಾ ಪ್ರಭಾವಕ್ಕಾಗಿ ಬಳಸಿದಾಗ ಅದರ ಪರಿಣಾಮ ಸಾಮಾನ್ಯ ಜನರ ಬದುಕಿನ ಮೇಲೆಯೇ ಬೀಳುತ್ತದೆ. ರಾಜಕೀಯದ ಭಾಷೆ ಸಮಾಜವನ್ನು ಒಗ್ಗೂಡಿಸುವಂತಿರಬೇಕು. ಭಿನ್ನಾಭಿಪ್ರಾಯವನ್ನು ಪ್ರಜಾಪ್ರಭುತ್ವದ ಸಹಜ ಭಾಗವಾಗಿ ಸ್ವೀಕರಿಸುವ ಸಂಸ್ಕೃತಿ ಬೆಳೆಸಬೇಕು.
ಮಾಧ್ಯಮಗಳ ಜವಾಬ್ದಾರಿಯೂ ಕಡಿಮೆಯಲ್ಲ. ಸುದ್ದಿ ವೇಗವಾಗಿ ತಲುಪಿಸುವುದು ತಂತ್ರಜ್ಞಾನದ ಸಾಮರ್ಥ್ಯ. ಆದರೆ ವೇಗದ ಜೊತೆಗೆ ಸತ್ಯವೂ ಇರಬೇಕು. ಜನರಲ್ಲಿ ಭಯ, ದ್ವೇಷ ಮತ್ತು ಆಕ್ರೋಶ ಹೆಚ್ಚಿಸುವ ಸಂಚಲನಕ್ಕಿಂತ ವಾಸ್ತವಾಂಶ, ಹಿನ್ನೆಲೆ ಮತ್ತು ಪರಿಹಾರದ ದಾರಿಯನ್ನು ತೋರಿಸುವ ಪತ್ರಿಕೋದ್ಯಮ ಸಮಾಜಕ್ಕೆ ಅಗತ್ಯ. ಸಾಮಾಜಿಕ ಮಾಧ್ಯಮ ಬಳಕೆದಾರರೂ ತಮ್ಮನ್ನು ಸಣ್ಣ ಮಾಧ್ಯಮಗಳೆಂದು ಅರಿತುಕೊಳ್ಳಬೇಕು. ನಾವು ಹಂಚುವ ಪ್ರತಿಯೊಂದು ಮಾಹಿತಿಗೂ ಪರಿಣಾಮವಿದೆ. ಒಂದು ಹಂಚಿಕೆ ಯಾರದೋ ಗೌರವಕ್ಕೆ ಧಕ್ಕೆ ತರಬಹುದು. ಒಂದು ಸುಳ್ಳು ಯಾರದೋ ಬದುಕನ್ನು ಹಾಳುಮಾಡಬಹುದು. ಒಂದು ಪ್ರಚೋದನಕಾರಿ ಮಾತು ಎರಡು ಗುಂಪುಗಳ ನಡುವೆ ಬಿರುಕು ಮೂಡಿಸಬಹುದು.
ಆದ್ದರಿಂದ ನಾಗರಿಕರ ಜವಾಬ್ದಾರಿ ಅತ್ಯಂತ ಮುಖ್ಯ. ನಮಗೆ ಸಿಕ್ಕಿರುವ ತಂತ್ರಜ್ಞಾನವನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ನಮ್ಮ ಸಾಮಾಜಿಕ ಸಂಸ್ಕೃತಿಯ ಮಟ್ಟವನ್ನು ತೋರಿಸುತ್ತದೆ. ಮಾಹಿತಿ ಸಿಕ್ಕ ತಕ್ಷಣ ಹಂಚುವ ಬದಲು ಪರಿಶೀಲಿಸಬೇಕು. ಭಿನ್ನಾಭಿಪ್ರಾಯ ಕಂಡಾಗ ಅವಮಾನಿಸುವ ಬದಲು ಚರ್ಚಿಸಬೇಕು. ನೋವಿನ ಘಟನೆ ಕಂಡಾಗ ವಿಡಿಯೋ ಮಾಡುವುದಕ್ಕಿಂತ ಸಾಧ್ಯವಾದರೆ ನೆರವಾಗಬೇಕು. ಅಪಾಯಕಾರಿ ಆಟೋಟವನ್ನು ಪ್ರಸಿದ್ಧಿಗಾಗಿ ಮಾಡುವ ಬದಲು ಅದರ ಪರಿಣಾಮವನ್ನು ಯೋಚಿಸಬೇಕು. ಪರದೆಯ ಆಚೆಯೂ ಮನುಷ್ಯನೊಬ್ಬ ಇದ್ದಾನೆ ಎಂಬ ಅರಿವು ಪ್ರತಿಯೊಂದು ಬಳಕೆಯಲ್ಲೂ ಇರಬೇಕು.
ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅದು ಸಮಾಜದ ಶಕ್ತಿಯಾಗುತ್ತದೆ. ರೈತನಿಗೆ ಮಾರುಕಟ್ಟೆ ತಲುಪಿಸುತ್ತದೆ. ವಿದ್ಯಾರ್ಥಿಗೆ ಜ್ಞಾನ ತಲುಪಿಸುತ್ತದೆ. ರೋಗಿಗೆ ವೈದ್ಯಕೀಯ ನೆರವು ತಲುಪಿಸುತ್ತದೆ. ಉದ್ಯೋಗಾರ್ಥಿಗೆ ಅವಕಾಶ ತೋರಿಸುತ್ತದೆ. ದೂರದ ಕುಟುಂಬಗಳನ್ನು ಸಂಪರ್ಕಿಸುತ್ತದೆ. ಆಡಳಿತವನ್ನು ಜನರ ಹತ್ತಿರ ತರುತ್ತದೆ. ವಿಪತ್ತಿನ ಸಂದರ್ಭದಲ್ಲಿ ತುರ್ತು ನೆರವಿಗೆ ದಾರಿ ಮಾಡಿಕೊಡುತ್ತದೆ. ಹೀಗಿರುವಾಗ ತಂತ್ರಜ್ಞಾನವನ್ನು ಶಂಕಿಸುವುದಕ್ಕಿಂತ ಅದರ ಬಳಕೆಯ ಸಂಸ್ಕೃತಿಯನ್ನು ಸರಿಪಡಿಸುವುದು ಮುಖ್ಯ.
ತಂತ್ರಜ್ಞಾನಕ್ಕೆ ಮಿತಿ ಹಾಕುವುದಕ್ಕಿಂತ ಅದರ ಬಳಕೆಗೆ ವಿವೇಕದ ಮಿತಿ ಬೇಕು. ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಕ್ಕಿಂತ ಸ್ವಾತಂತ್ರ್ಯದ ಜೊತೆಗೆ ಹೊಣೆಗಾರಿಕೆಯ ಅರಿವು ಬೇಕು. ಕಾನೂನು ಕಠಿಣವಾಗಿರಬೇಕು, ಆದರೆ ನ್ಯಾಯಯುತವಾಗಿರಬೇಕು. ಸರ್ಕಾರ ಎಚ್ಚರವಾಗಿರಬೇಕು, ಆದರೆ ನಾಗರಿಕರ ಹಕ್ಕುಗಳನ್ನೂ ಗೌರವಿಸಬೇಕು. ಮಾಧ್ಯಮ ಸ್ವತಂತ್ರವಾಗಿರಬೇಕು, ಆದರೆ ಸತ್ಯದ ಹೊಣೆಗಾರಿಕೆಯನ್ನು ಮರೆಯಬಾರದು. ಜನರು ತಂತ್ರಜ್ಞಾನವನ್ನು ಬಳಸಬೇಕು, ಆದರೆ ತಂತ್ರಜ್ಞಾನವೇ ತಮ್ಮ ಮನಸ್ಸನ್ನು ಬಳಸುವ ಸ್ಥಿತಿಗೆ ಹೋಗಬಾರದು.
ಸಮಾಜದ ಸಾಮರಸ್ಯವನ್ನು ಕಾಪಾಡುವುದು ಸರ್ಕಾರದ ಕೆಲಸ ಮಾತ್ರವಲ್ಲ. ಅದು ಪ್ರತಿಯೊಬ್ಬ ನಾಗರಿಕನ ದಿನನಿತ್ಯದ ನಡೆಗೂ ಸಂಬಂಧಿಸಿದೆ. ನಾವು ಬರೆಯುವ ಮಾತು, ಹಂಚುವ ಚಿತ್ರ, ಮಾಡುವ ವಿಡಿಯೋ, ನೀಡುವ ಪ್ರತಿಕ್ರಿಯೆ, ವ್ಯಕ್ತಪಡಿಸುವ ಅಭಿಪ್ರಾಯ ಎಲ್ಲವೂ ಸಾಮಾಜಿಕ ವಾತಾವರಣವನ್ನು ರೂಪಿಸುತ್ತವೆ. ಹೀಗಾಗಿ ತಂತ್ರಜ್ಞಾನದ ಅತಿರೇಕವನ್ನು ತಡೆಯುವ ಮೊದಲ ಹೆಜ್ಜೆ ಹೊರಗಿನ ಸಾಧನವನ್ನು ನಿಲ್ಲಿಸುವುದಲ್ಲ, ಒಳಗಿನ ವಿವೇಕವನ್ನು ಎಚ್ಚರಿಸುವುದು.
ತಂತ್ರಜ್ಞಾನ ನಮ್ಮ ಕೈಯಲ್ಲಿರುವ ಸಾಧನವಾಗಿರಲಿ, ನಮ್ಮ ಮನಸ್ಸನ್ನು ಆಳುವ ಶಕ್ತಿಯಾಗದಿರಲಿ. ಅದು ಜ್ಞಾನವನ್ನು ಹೆಚ್ಚಿಸಲಿ, ದ್ವೇಷವನ್ನು ಅಲ್ಲ. ಸಂಬಂಧಗಳನ್ನು ಬೆಸೆಯಲಿ, ಬಿರುಕು ಮೂಡಿಸದಿರಲಿ. ಸಮಾಜವನ್ನು ಎಚ್ಚರಿಸಲಿ, ಕೆರಳಿಸದಿರಲಿ. ಅಭಿವೃದ್ಧಿಯ ವೇಗದ ಜೊತೆಗೆ ಮಾನವೀಯತೆಯ ಆಳವೂ ಹೆಚ್ಚಾದಾಗ ಮಾತ್ರ ತಂತ್ರಜ್ಞಾನ ನಿಜವಾದ ಪ್ರಗತಿಯ ಸಾಧನವಾಗುತ್ತದೆ. ಇಲ್ಲವಾದರೆ ಅತ್ಯಾಧುನಿಕ ಸಾಧನಗಳ ನಡುವೆ ಬದುಕುತ್ತಿದ್ದರೂ, ಹಳೆಯ ದ್ವೇಷಗಳ ಬಂಧನದಲ್ಲಿರುವ ಸಮಾಜವಾಗಿಬಿಡುತ್ತೇವೆ. ಆದ್ದರಿಂದ ತಂತ್ರಜ್ಞಾನವನ್ನು ತಿರಸ್ಕರಿಸುವುದಲ್ಲ, ಅದರ ಅತಿರೇಕವನ್ನು ತಿದ್ದಿಕೊಳ್ಳುವುದು ಮತ್ತು ಅದರ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವುದು ಇಂದಿನ ಸಾಮಾಜಿಕ ಜಾಗೃತಿಯ ಅತ್ಯಗತ್ಯ ಕರ್ತವ್ಯವಾಗಿದೆ .
ಲೇಖನ: ಕಾಶಿಗೌ, ಸಾಹಿತಿ ನಿವೃತ್ತ ಪ್ರಾಂಶುಪಾಲರು, ಮೈಸೂರು.



