ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟರಿಗೆಲ್ಲಿದೆ SCSP/TSP ಅನುದಾನ ಗ್ಯಾರೆಂಟಿ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಪ್ರಸಕ್ತ ಸಾಲಿನ (2025-26) ಬಜೆಟ್ ನಲ್ಲಿ SCSP/TSP ಅಡಿ ಪರಿಶಿಷ್ಠ ಸಮುದಾಯಗಳಿಗೆ ಒದಗಿಸಿ ಒಟ್ಟು 42,017.51 ಕೋಕೋಟಿ ಅನುದಾನದಲ್ಲಿ 11,896.84 ಕೋಟಿ ಹಣವನ್ನ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ದಲಿತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆಯಲು ಹೊರಟಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ, ಅನುದಾನ ಹಂಚಿಕೆ ಮಾಡಲು ಹಣವಿಲ್ಲದ ಮೇಲೆ ಸುಮ್ಮನೆ ಕಾಟಾಚಾರಕ್ಕೆ ಬಜೆಟ್ ನಲ್ಲಿ ಘೋಷಣೆ ಮಾಡುವುದಾದರೂ ಯಾತಕ್ಕೆ? ಬಜೆಟ್ ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ, ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತಾ? ಇದೇನಾ ತಮಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಇರುವ ಬದ್ಧತೆ? ಇದೇನಾ ತಾವು ಭಾಷಣ ಬಿಗಿಯುವ ಸಾಮಾಜಿಕ ನ್ಯಾಯ? ಎಂದು ಅಶೋಕ್ ಅವರು ತೀಕ್ಷ್ಣವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಒಂದು ಕಡೆ ಬಿಡುಗಡೆ ಮಾಡಿರುವ ಅಲ್ಪ ಸ್ವಲ್ಪ ಅನುದಾನವನ್ನ ಭ್ರಷ್ಟಾಚಾರದ ಮೂಲಕ ಲೂಟಿ ಹೊಡೆಯುತ್ತೀರಿ, ಮತ್ತೊಂದು ಕಡೆ ಘೋಷಣೆ ಮಾಡಿದ ಅನುದಾನವನ್ನ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಳ್ಳುತ್ತೀರಿ.
ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ. ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಅನ್ನುವುದು ಇದ್ದರೆ ಇನ್ನೆಂದೂ ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಅಶೋಕ್ ತಾಕೀತಿ ಮಾಡಿದ್ದಾರೆ.


