Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು...

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾನುವಾರದ ನಮ್ಮ ಕುಟುಂಬದ ದಿನಚರಿ.......


ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು. ನಾನೂ ಬಾಗಿ ಆಕೆಯನ್ನು ತಬ್ಭಿ ಪ್ರತಿ ಮುತ್ತನ್ನು ನೀಡಿದೆ. ಮಧ್ಯದಲ್ಲಿ ನನ್ನನ್ನು  ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದ ನಮ್ಮ ಪುಟ್ಟ ಕಂದ ಈ ಕದಲುವಿಕೆಯಿಂದ ಕಣ್ಣು ಬಿಟ್ಟಿತು. ತನ್ನ ಕತ್ತನ್ನು ಪಕ್ಕಕ್ಕೆ ಹೊರಳಿಸಿ ಅವರ ಅಮ್ಮನನ್ನು  ತದೇಕಚ್ಚಿತ್ತದಿಂದ ನೋಡಿತು. ಅಮ್ಮ ಆ ಮಗುವಿಗೂ ಒಂದು ಮುತ್ತು ನೀಡಿ ಎದ್ದು ಹೊರ ನಡೆಯಿತು. ಪುಟ್ಟ ಕಂದ ಮತ್ತೆ ನನ್ನನ್ನು ಬಾಚಿ ತಬ್ಬಿಕೊಂಡು ನಿದ್ದೆಗೆ ಜಾರಿತು. 

ಇಂದು ಭಾನುವಾರ. ಹಾಗೇ ಆ ಮಗುವನ್ನೂ, ಕಿಟಕಿಯಾಚೆಯ ತುಂತುರು ಸೋನೆ ಮಳೆಯನ್ನು ದಿಟ್ಟಿಸುತ್ತಾ ಮೊನ್ನೆಯಷ್ಟೇ ನಿಧನರಾದ ಕನ್ನಡ ಸಾಹಿತ್ಯದ ಭಾವ ಲಹರಿಯನ್ನು, ಮಣ್ಣಿನ ಸೊಗಡಿನಲ್ಲಿ ತನ್ನ ಕಾವ್ಯದಲ್ಲಿ ಹಿಡಿದಿಟ್ಟ  ಕವಿ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಯವರ "ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ " ಎಂಬ ಸಾಲುಗಳು ಜೊತೆಗೆ, " ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ - ಬೇವ ಅಗಿವ ಸವಿಗಾನದ ಹಕ್ಕಿ  ಹಾಡಿ ಹಾಡಿ ಮುಕ್ತ " ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಯ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಕನಸಿನ ರಮ್ಯ ಲೋಕದಲ್ಲಿ ಇರುವಾಗ ನನ್ನ ಹೆಂಡತಿ ಬಿಸಿ ಬಿಸಿ ಹಬೆಯಾಡುವ ಕಾಫಿ ಕೈಯಲ್ಲಿ ಹಿಡಿದು ಬಂದಳು. ನಾನು ಹಾಗೆ ಮಗುವಿನ ಕೈ ಬಿಡಿಸಿಕೊಂಡು ಹಾಸಿಗೆಯ ಮೇಲೆಯೇ ದಿಂಬುಸರಿಸಿ ಮಂಚಕ್ಕೆ ಒರಗಿ ಕುಳಿತು ಕಾಫಿ ಹೀರ ತೊಡಗಿದೆ. ಆಕೆಯೂ ಪಕ್ಕದಲ್ಲಿ ಕುಳಿತು ಕಾಫಿ ಕುಡಿಯುತ್ತಾ ಕೇಳಿದಳು " ಇಂದು ಬೆಳಗಿನ ಉಪಹಾರ ಏನಿರಬೇಕು " ನಾನು ನನ್ನಾಸೆಯ ನೀರು ದೋಸೆ, ಕಾಯಿ ಚಟ್ನಿ, ಮೊಟ್ಟೆ ಪಲ್ಯ ಬೇಕೆಂದು ಹೇಳಿದಾಗ ಆಕೆ ನನ್ನನ್ನೊಮ್ಮೆ ಪ್ರೀತಿಯಿಂದ ದಿಟ್ಟಿಸಿ " ಸರಿ " ಎಂದಳು.

ಆಕೆ ಇನ್ನೇನು ಎದ್ದು ಹೊರಡಬೇಕೆನ್ನುವಾಗ ಕೈ ಹಿಡಿದು ಹೇಳಿದೆ "ತುಂಬಾ ಗಡಿಬಿಡಿ ಏನು ಬೇಡ. ಸುಮಾರು 9:00 ಗಂಟೆಯಷ್ಟೊತ್ತಿಗೆ ರೆಡಿಯಾದರೆ ಸಾಕು. ಹತ್ತು ಗಂಟೆಗೆ ಸರಿಯಾಗಿ ನೇತ್ರಾವತಿ ನದಿ ಹುಟ್ಟುವ ಸ್ಥಳಕ್ಕೆ ಚಾರಣ ಹೋಗಿ ಬರೋಣ. ಮಧ್ಯಾಹ್ನ ಅಲ್ಲೇ ಒಂದು ರೆಸಾರ್ಟಿನಲ್ಲಿ ಊಟ ಮಾಡಿ, ಸಂಜೆ ಹಾಗೆಯೇ ಗೆಳೆಯ ವಿಕ್ರಮನ ಮನೆಗೆ ಭೇಟಿ ನೀಡಿ ರಾತ್ರಿ ಅಲ್ಲೇ ಅವರ ಮನೆಯಲ್ಲಿ ಭರ್ಜರಿ ಊಟ ಮಾಡಿ ಬರೋಣ" ಎಂದು ಹೇಳಿದೆ.

ಹೆಂಡತಿಯ ಬಟ್ಟಲು ಕಣ್ಣುಗಳಲ್ಲಿ ಸಂತೋಷದ ಮಿಂಚು ಹರಿದಾಡಿತ್ತು. ನನ್ನನ್ನು ತಬ್ಬಿಕೊಂಡು ಮತ್ತೆ ಮುತ್ತು ನೀಡಿ ಅಡಿಗೆ ಮನೆ ಕಡೆ ನಡೆದಳು. ಈ ಮಧ್ಯೆ ದಿನ ಪತ್ರಿಕೆ ಬಂದು ಸುಮಾರು ಒಂದು ಗಂಟೆ ಪತ್ರಿಕೆಯನ್ನು ಓದಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಕ್ರಿಕೆಟ್ ಆಡುತ್ತಿದೆ. ಫೈನಲ್ ತಲುಪಿದೆ. ಬಹುಶಃ ಈ ಬಾರಿ ಕಪ್ ನಮ್ಮದೇ ಎಂಬ ಭರವಸೆ ಮೂಡಿಸಿದೆ. ಇನ್ನು ಒಂದೇ ಹೆಜ್ಜೆ. ಹೇಗಾದರೂ ಮಾಡಿ ಮಂಗಳವಾರ ಬೇಗ ಮನೆ ಸೇರಿ ಮ್ಯಾಚ್ ನೋಡಬೇಕು ಎಂದು ನಿರ್ಧರಿಸಿದೆ.

ಪತ್ರಿಕೆಯ ಮುಖಪುಟದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆಯ ಅನಾಹುತದಿಂದ ಆರ್ಯನ್ ಮತ್ತು ಆಯುಷ್ ಎಂಬ ಇಬ್ಬರು ಪುಟ್ಟ ಮಕ್ಕಳು ತಮ್ಮ ತಾಯಿಯ ಮಡಿಲಲ್ಲಿಯೇ ಪ್ರಾಣಬಿಟ್ಟ ಸುದ್ದಿ ಓದಿ ಮನಸ್ಸಿಗೆ ತುಂಬಾ ನೋವಾಯಿತು. ನನ್ನ ಪುಟ್ಟ ಮಗುವನ್ನು ಹಾಗೆ ದಿಟ್ಟಿಸಿದೆ. ಮನಸ್ಸು ತಡೆಯಲಾಗಲಿಲ್ಲ. ತಲೆ ಕೊಡವಿ ಆ ಘಟನೆಯನ್ನು ಮರೆಯಲು ಪ್ರಯತ್ನಿಸಿದೆ. ಬೇಗ ರೆಡಿಯಾಗೋಣ ಎಂದು ಮಗುವನ್ನು ಮುದ್ದಿಸಿ ನಿಧಾನವಾಗಿ ಎಚ್ಚರಗೊಳಿಸಿ ಬಾತ್ ರೂಂ ಕಡೆ ಹೊರಟೆ.

ಮಗುವಿಗೆ ಸ್ನಾನ ಮಾಡಿಸುವುದೇ ಒಂದು ಸಂಭ್ರಮ. ದೊಡ್ಡ ಬಾತ್ ಟಬ್ ನಲ್ಲಿ ಹದವಾಗಿ ಬೆರೆಸಿದ ನೀರಿನಲ್ಲಿ ಮಗುವನ್ನು ಕೂರಿಸಿ ಆ ನೀರಿನಲ್ಲೇ ಸೋಪಿನ ನೊರೆ ಬರುವಂತೆ ಮಾಡಿ, ಹತ್ತು ಹದಿನೈದು ನಿಮಿಷ ಆಟ ಆಡಿದ ನಂತರವೇ ಸ್ವಲ್ಪ ಸ್ನಾನ ಮಾಡಿಸಿ, ಹೆಂಡತಿಗೆ ಮಗುವನ್ನು ಕೊಟ್ಟು ನಾನು ಸ್ನಾನ ಮಾಡಿಕೊಂಡು ಒಂಬತ್ತು ಗಂಟೆಗೆ ಸರಿಯಾಗಿ ತಿಂಡಿಗೆ ಮೂವರು ಒಟ್ಟಾಗಿ ಕುಳಿತೆವು.

ಕಾಯಿ ಚಟ್ನಿ, ಮೊಟ್ಟೆ ಪಲ್ಯದೊಂದಿಗೆ ನೀರು ದೋಸೆಯನ್ನು ತಿನ್ನುತ್ತಾ, ಆಗಾಗ ಮಗುವಿಗೆ ಬಲವಂತದಿಂದ ಒಂದೊಂದೇ ತುತ್ತು ತಿನ್ನಿಸುತ್ತಾ, ಮಳೆಯ ಅವಾಂತರದ ಬಗ್ಗೆ ಹೆಂಡತಿ ಜೊತೆ ಚರ್ಚಿಸುತ್ತಾ, ಪ್ರಯಾಣಕ್ಕೆ ತೆಗೆದುಕೊಳ್ಳಬೇಕಾದ ವಸ್ತುಗಳು, ತಿಂಡಿಗಳು, ಮಳೆ ಚಳಿಯ ರಕ್ಷಣೆಗೆ ಮಾಡಿಕೊಳ್ಳಲು ಬೇಕಾದ ಸಿದ್ಧತೆ, ಶೂ, ಚಪ್ಪಲಿ ಎಲ್ಲವನ್ನು ಮಾತನಾಡಿಕೊಂಡೆವು. 10:00 ಗಂಟೆಯ ಸುಮಾರಿಗೆ ಎಲ್ಲರೂ ಟ್ರ್ಯಾಕ್ ಸೂಟ್, ರೈನ್ ಕೋಟ್ ಮತ್ತು ಶೂಗಳೊಂದಿಗೆ ಸಿದ್ಧವಾಗಿ ಹೊರಟೆವು.

ಇನ್ನೂ ತುಂತುರು ಮಳೆ ಬೀಳುತ್ತಲೆ ಇತ್ತು.  ಕಾರಿನಲ್ಲಿ ಆ ದಟ್ಟ ಹಸಿರ ಕಾಡಿನ ನಡುವೆ ಡ್ರೈವ್ ಮಾಡುವುದು ಒಂದು ಅದ್ಭುತ ಅನುಭವ. ಪಕ್ಕದಲ್ಲಿ ಹೆಂಡತಿ, ಆಕೆಯ ತೊಡೆಯ ಮೇಲೆ ಪುಟ್ಟ ಕಂದ, ಅದರ ತೊದಲು ನುಡಿಗಳು.

ನಮ್ಮ ಇಡೀ ಪ್ರಯಾಣದ ಕೇಂದ್ರ ಬಿಂದುವೇ ಆ ಕಂದ. ಅದರ ಮಾತುಗಳು, ಚೇಷ್ಟೆಗಳು, ಮಧ್ಯೆ ಮಧ್ಯೆ ತಿಂಡಿ ತಿನಿಸುಗಳು, ಮಗುವಿನ ನಿದ್ದೆ ಎಲ್ಲವೂ ಅದರ ಸುತ್ತಲೇ ಕೇಂದ್ರೀಕೃತ. ಅದು ಮಲಗಿದಾಗಲೂ ಅದರ ಚಟುವಟಿಕೆಯ ಕುರಿತೇ ನಮ್ಮಿಬ್ಬರ ಮಾತುಗಳು.

ಸುಮಾರು ಎರಡು ಗಂಟೆಯ ಪ್ರಯಾಣದ ನಂತರ ಕಾರಿನಲ್ಲಿ ಒಂದು ನಿರ್ದಿಷ್ಟ ಜಾಗ ತಲುಪಿದೆವು. ಅಲ್ಲಿ ಕಾರನ್ನು ನಿಲ್ಲಿಸಿ ಮಗುವನ್ನ ಎತ್ತಿಕೊಂಡು ನೇತ್ರಾವತಿ ಹುಟ್ಟುವ ಜಾಗಕ್ಕೆ ನಿಧಾನವಾಗಿ ಬೆಟ್ಟದ ಸಾಲುಗಳ ನಡುವೆ ಹತ್ತ ತೊಡಗಿದೆವು. ಅದಾಗಲೇ ಒಂದಷ್ಟು ಜನ ನಮ್ಮಂತೆ ಚಾರಣಿಗರು ಬಂದು ಹತ್ತಲು ಪ್ರಾರಂಭಿಸಿದ್ದರು. ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಆ ತುಂತುರು ಹನಿಯಲ್ಲಿ ಅದಕ್ಕೆ ಎಲ್ಲವನ್ನು ಹೇಳುತ್ತಾ ನಾನು ಹೆಜ್ಜೆ ಹಾಕುತ್ತಿದ್ದರೆ ನನ್ನ ಹಿಂದೆ ಕ್ಯಾಪ್ ಧರಿಸಿದ ಹೆಂಡತಿ ಮಗುವಿಗೆ ಬೇಕಾದ ಎಲ್ಲಾ ತಿಂಡಿ ತಿನಿಸುಗಳ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು ನಡೆಯುತ್ತಾ ಬರುತ್ತಿದ್ದಳು.

ಸುಮಾರು ಮುಕ್ಕಾಲು ಗಂಟೆಯ ನಂತರ ಸ್ವಲ್ಪ ಎತ್ತರದ ಪ್ರದೇಶ ಹತ್ತಿದ ಮೇಲೆ ಒಂದು 15 ನಿಮಿಷದ ವಿರಾಮಕ್ಕಾಗಿ ಅಲ್ಲಿಯೇ ಇದ್ದ ಕಲ್ಲು ಬಂಡೆಯ ಮೇಲೆ ಕುಳಿತೆವು. ಮಗುವನ್ನು ಇಳಿಸಿ ಸುತ್ತಲೂ ಒಮ್ಮೆ ಕಣ್ಣಾಡಿಸಿದೆ.

ಅದ್ಭುತ, ಅತ್ಯದ್ಭುತ ಸೌಂದರ್ಯ. ಸುತ್ತಲೂ ಬೆಟ್ಟದ ಸಾಲುಗಳು. ಅದಕ್ಕೆ ಕಳಸವಿಟ್ಟಂತೆ ಮೋಡಗಳು ತುಂತುರು ಹನಿ ಉದುರಿಸುತ್ತಾ ಬೆಟ್ಟದ ಸಾಲಿನಲ್ಲಿ ಚಲಿಸುವ ದೃಶ್ಯಗಳು ಪ್ರಕೃತಿಯ ಸೌಂದರ್ಯದ ಉತ್ತುಂಗದಂತೆ ಕಣ್ಣಿಗೆ ಕಂಡ ದೃಶ್ಯಗಳು ಮೆದುಳನ್ನು ಬೈಪಾಸ್ ಮಾಡಿ ನೇರವಾಗಿ ಹೃದಯಕ್ಕೆ ನಾಟುತ್ತಿದ್ದವು. ಆ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸ್ಟೇಟಸ್ ಗೆ ಹಾಕಿ ನಾವು ಮೂವರು ಕೆಲವು ಸೆಲ್ಫಿ ತೆಗೆದುಕೊಂಡು, ಮಗುವಿನ ವಿವಿಧ ಭಂಗಿಯ ದೃಶ್ಯಗಳನ್ನು ತೆಗೆದು ಅದನ್ನು ನೋಡಿ ಇಬ್ಬರು ಆನಂದಿಸಿದೆವು.

ಅಲ್ಲಿಯೇ ಮಗುವಿಗೆ ಮನೆಯಿಂದ ತಂದಿದ್ದ ಹಾಲು ಕುಡಿಸಿ, ಮತ್ತೆ ಇಳಿಜಾರಿನಲ್ಲಿ ನಡೆಯುತ್ತಾ ಸಾಗಿದೆವು. ಮುಕ್ಕಾಲು ಗಂಟೆ ಮತ್ತೆ ನಡೆದ ನಂತರ ನೇತ್ರಾವತಿಯ ಹುಟ್ಟಿನ ಆ ಸ್ಥಳ ತಲುಪಿದೆವು. ಕಾಡಿನ ಮಧ್ಯೆ ಅಲ್ಲಿ ನೀರು ಬುಗ್ಗೆ ಬುಗ್ಗೆಯಂತೆ ಚಿಮ್ಮಿ ಫಾಲ್ಸ್ ನಂತೆ ಚಿಕ್ಕದಾಗಿ ಕೆಳಗೆ ಧುಮುಕುತ್ತಾ ಇದ್ದ ಆ ಸೌಂದರ್ಯವನ್ನು ವರ್ಣಿಸುವುದು ತುಂಬಾ ಕಷ್ಟ. ಏಕೆಂದರೆ ಪ್ರಕೃತಿಯ ಅಣುವಿನ ಕಣ ನಾವು. ಆ ಕಣ  ಸೌಂದರ್ಯದ ಅಗಾಧತೆಯನ್ನು ಅಕ್ಷರಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಭಾವನೆಯ ಕಡಲು ಅನುಭವಿಸಿದವರಿಗಷ್ಟೇ ಸಿಗುವುದು.

ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕುರುಕಲು ತಿಂಡಿ ತಿಂದೆವು. ಅಷ್ಟೊತ್ತಿಗೆ ಆಗಲೇ ತುಂತುರು ಹನಿಗಳಿಂದ ಮೈಯೆಲ್ಲಾ ಸಣ್ಣದಾಗಿ ಒದ್ದೆಯಾಗಿತ್ತು. ಚಳಿಯೂ ಹೆಚ್ಚಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ರೈನ್ ಕೋಟ್  ಒಳಗೆ ಸೇರಿಸಿ ಮತ್ತೆ ಅಲ್ಲಿಂದ ಹೊರಟೆವು.

ಮೋಡಗಳೇ ಗಾಳಿಯಲ್ಲಿ ತೇಲುತ್ತಾ ತುಂತುರು ಹನಿಗಳನ್ನು ಎಲ್ಲ ಕಡೆ ಚದುರಿಸುತ್ತಾ ಹಾದು ಹೋಗುತ್ತಿದ್ದವು. ಅದನ್ನು ಅನುಭವಿಸುತ್ತಾ ಸುಮಾರು ಎರಡು ಗಂಟೆಯಷ್ಟು ನಡೆದು ಕಾರಿನ ಬಳಿ ಬಂದೆವು. ಅಲ್ಲಿಂದ ನೇರವಾಗಿ ಹದಿನೈದು ಕಿಲೋಮೀಟರ್ ಸಂಚರಿಸಿದ ನಂತರ ಒಂದು ರೆಸಾರ್ಟ್ ತಲುಪಿದೆವು. ಮಧ್ಯಾಹ್ನ ಭರ್ಜರಿಯಾದ ಬಫೆಟ್ ಊಟ. ಮಲೆನಾಡು ಶೈಲಿಯ ಎಲ್ಲಾ ಸಸ್ಯಾಹಾರ, ಮಾಂಸಾಹಾರದ ಖಾದ್ಯಗಳು ಬಿಸಿಬಿಸಿಯಾಗಿ ರೆಡಿ ಇದ್ದವು. ನಮಗಿಂತ ಮೊದಲೇ ಒಂದಷ್ಟು ಕುಟುಂಬಗಳು ತಮಗೆ ಬೇಕಾದನ್ನು ಹಾಕಿಕೊಂಡು ಊಟ ಮಾಡುತ್ತಿದ್ದರು. ಅಲ್ಲಿಯೇ ಬಿಸಿಬಿಸಿಯಾಗಿ ನೀರು ದೋಸೆ, ಆಮ್ಲೆಟ್ ಬೇಕೆಂದವರಿಗೆ ಮಾಡಿಕೊಡುತ್ತಿದ್ದರು.

ರೆಸಾರ್ಟಿನಲ್ಲಿ ನಾಯಿ, ಬೆಕ್ಕು, ಬಾತುಕೋಳಿ, ಗಿಳಿ, ಮೊಲ ಮುಂತಾದ ಕೆಲವು ಪ್ರಾಣಿ ಪಕ್ಷಿಗಳನ್ನು ಆಕರ್ಷಣೆಗಾಗಿ ಸಾಕಿದ್ದರು. ಮಗು ಅದರೊಂದಿಗೆ ತುಂಬಾ ಖುಷಿ ಖುಷಿಯಾಗಿ ಆಡುತ್ತಿತ್ತು. ನಾನು ತಟ್ಟೆಗೆ ಆಮ್ಲೆಟ್ ಹಾಕಿಕೊಂಡು ಅದು ಓಡುತ್ತಿದ್ದಂತೆ ನಾನು ಅದರ ಜೊತೆಗೆ ಓಡುತ್ತಾ ಒಂದೊಂದೇ ತುತ್ತು ತಿನ್ನಿಸುತ್ತಿದೆ. ಹೆಂಡತಿಗೆ ಮೊದಲು ಊಟ ಮಾಡಲು ಹೇಳಿ ಮಗುವಿನ ಜವಾಬ್ದಾರಿ ನಾನು ತೆಗೆದುಕೊಂಡಿದ್ದೆ. ಆಕೆ ಊಟ ಮುಗಿಸಿ ಬರುವಷ್ಟರಲ್ಲಿ ಒಂದು ಪೂರ್ತಿ ಆಮ್ಲೆಟ್ ಮಗುವಿಗೆ ತಿನ್ನಿಸಿದ್ದೆ. ನಂತರ ಮಗುವಿನ ಜವಾಬ್ದಾರಿ ಆಕೆಗೆ ಕೊಟ್ಟು ನಾನು ಊಟ ಮಾಡಲು ಹೊರಟೆ.

ನನಗೆ ಇಷ್ಟದ ಕೆಲವು ಪದಾರ್ಥಗಳನ್ನು ಊಟದ ತಟ್ಟೆಗೆ ಹಾಕಿ ಅಲ್ಲಿ ಚೇರ್ ಮೇಲೆ ಕುಳಿತೆ. ಮನಸ್ಸು ತಡೆಯಲಿಲ್ಲ. ಹೆಂಡತಿ ಮಗುವಿದ್ದ ಜಾಗಕ್ಕೆ ತಟ್ಟೆ ಹಿಡಿದು ಬಂದೆ. ಅವರನ್ನು ನೋಡುತ್ತಾ ಅವರೊಂದಿಗೆ ತಿನ್ನುವುದೇ ಒಂದು ಖುಷಿ. ಹೆಂಡತಿ ಬೇಡ ಕುಳಿತು ತಿನ್ನಿ ಎಂದರು ಕೇಳದೆ ಅಲ್ಲಿಯೇ ನಿಂತು ಕೈಯಲ್ಲಿ ತಟ್ಟೆ ಹಿಡಿದು ಮಗುವಿನ ಆಟವನ್ನು, ಅದನ್ನು ಹಿಡಿಯಲು ಹೆಂಡತಿ ಪಡುತ್ತಿದ್ದ ಸಾಹಸವನ್ನು ಕಣ್ತುಂಬ ನೋಡಿಕೊಂಡು ಒಂದೊಂದೇ ತುತ್ತು ನಿಧಾನವಾಗಿ

ಇಳಿಸತೊಡಗಿದೆ. ಆ ವಾತಾವರಣಕ್ಕೂ, ಆ ರುಚಿ ರುಚಿಯಾದ ಊಟಕ್ಕೂ, ಹೆಂಡತಿ ಮಗುವಿನ ಆಟಕ್ಕೂ ಸ್ವರ್ಗ ಮೂರೇ ಗೇಣು ಎನ್ನುವಂತಿತ್ತು ಮನಸ್ಸು.

ಊಟ ಮಾಡಿ ಮೂವರು ಒಟ್ಟಿಗೇ ಕುಳಿತು ಬಿಸಿ ಬಿಸಿಯಾದ ಚಹ ಕುಡಿದು ಸುಮಾರು 40 ಕಿಲೋ ಮೀಟರ್ ದೂರದಲ್ಲಿರುವ ಗೆಳೆಯನ ಮನೆ ಕಡೆ ಹೊರಟೆವು. ಮಲೆನಾಡು ಭಾಗದಲ್ಲಿ 40 ಕಿಲೋಮೀಟರ್ ಸಂಚರಿಸಲು ಈ ಮಳೆಯಲ್ಲಿ ಸುಮಾರು 2 ಗಂಟೆ ಸಮಯ ಬೇಕಾಗುತ್ತದೆ. ಸಂಜೆ ಐದು ಗಂಟೆ ಹೊತ್ತಿಗೆ ಗೆಳೆಯನ ಮನೆ ತಲುಪಿದೆವು.

ಕಾಫಿ ಬೆಳೆಗಾರರಾದ ನನ್ನ ಗೆಳೆಯ ನಮಗಾಗಿ ಕಾಯುತ್ತಾ ಇದ್ದ. ನಮ್ಮಂತೆ ಅವರಿಗೂ ಒಂದು ಮಗುವಿದೆ. ತಂದೆ ತಾಯಿ ಅಜ್ಜ ಅಜ್ಜಿ ಎಲ್ಲರೂ ಇರುವ ಕೂಡು ಕುಟುಂಬ ಅವರದು. ಮಲೆನಾಡಿನ ಹಳೆಯ ಕಾಲದ ತೊಟ್ಟಿ ಮನೆ. ಮಗುವಿಗೆ ಆಟವಾಡಲು ಜೊತೆ ಸಿಕ್ಕಂತಾಯಿತು.

ಎಲ್ಲರೂ ಒಟ್ಟಿಗೆ ವರಾಂಡಾದಲ್ಲಿಯೇ ಕುಳಿತು ಮಾತನಾಡತೊಡಗಿದೆವು. ಗೆಳೆಯನ ಪತ್ನಿಯೋ ಬಿಸಿಬಿಸಿಯಾದ ಚಕ್ಕುಲಿ, ಕೊಡುಬಳೆ, ನಿಪ್ಪಟ್ಟು, ರವೆ ಉಂಡೆ, ಮಾವಿನ ಹಣ್ಣಿನ ಹೋಳು, ಹಲಸಿನ ಹಣ್ಣು ಎಲ್ಲವನ್ನು ದೊಡ್ಡ ತಟ್ಟೆಯಲ್ಲಿ ಹಾಕಿಕೊಂಡು ಬಂದು ಮುಂದೆ ಇಟ್ಟರು. ಮಧ್ಯಾಹ್ನ ಭರ್ಜರಿ ಊಟ ಆಗಿದ್ದ ನಮಗೆ ಈ ಸಂಜೆಯ ಸ್ನಾಕ್ಸ್ ತುಂಬಾ ದೊಡ್ಡದಾಗಿ ಕಂಡಿತು. ಏಕೆಂದರೆ  ರಾತ್ರಿಯ ಭಕ್ಷ್ಯ ಭೋಜನ ಬೇರೆ ರೆಡಿ ಆಗುತ್ತಿದೆ. ಆದರೂ ಈ ತಣ್ಣನೆಯ ವಾತಾವರಣಕ್ಕೆ ಊಟ ತುಸು ಹೆಚ್ಚಾದರೂ ಹೊಟ್ಟೆ ಭಾರವಾಗುವುದಿಲ್ಲ.

ಹಳೆಯ ನೆನಪುಗಳನ್ನು ಮಾತನಾಡುತ್ತಾ ಸುಮಾರು ಹೊತ್ತು ಕಳೆದವು. ನಿಧಾನವಾಗಿ ಕತ್ತಲು ಆವರಿಸುತ್ತಿತ್ತು. ಕೀಟಗಳ ಗುಜುಗುಜು ಶಬ್ದ ಈಗ ಹೆಚ್ಚಾಗ ತೊಡಗಿತು. ಮನೆಯಲ್ಲಿ ದೀಪಗಳು ಉರಿಯಲಾರಂಭಿಸಿದವು. ಚಳಿ ಹೆಚ್ಚಾದ್ದರಿಂದ ಎಲ್ಲರೂ ಮನೆ ಒಳಗೆ ಹೊರಟೆವು.

ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತಾ ಮತ್ತೆರಡು ಗಂಟೆ ಕಳೆದದ್ದು ಗೊತ್ತಾಗಲೇ ಇಲ್ಲ. ಅಷ್ಟು ಹೊತ್ತಿಗೆ ಊಟ ರೆಡಿಯಾಗಿತ್ತು. ನಮಗಾಗಿ ಕಾಡಿನ ವಿಶೇಷ ಸಸ್ಯಹಾರ ಮತ್ತು ಮಾಂಸಹಾರ ಎರಡನ್ನೂ ಮಾಡಿದ್ದರು. ಅಷ್ಟು ಹೊತ್ತಿಗಾಗಲೇ ಬೆಳಗಿನಿಂದ ಸುಸ್ತಾಗಿದ್ದ ಮಗು ನಿದ್ದೆ ಮಾಡಿತ್ತು. ಇನ್ನು ಅದನ್ನು ಎಚ್ಚರಿಸಿ ಊಟ ಮಾಡಿಸುವುದು ಕಷ್ಟ ಎಂದು ಭಾವಿಸಿ ಹಾಗೆಯೇ ಮಲಗಿಸಿದೆವು.

ನಾವು ಊಟ ಮಾಡಿ, ಎಲೆ ಅಡಿಕೆ ಜಗಿದು ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಹೊರಡುವ ವೇಳೆಗೆ ಸುಮಾರು ರಾತ್ರಿ 10:00. ಅವರು ಅಲ್ಲೇ ಮಲಗಲು ಒತ್ತಾಯಿಸಿದರು. ನಾಳೆ ಆಫೀಸ್ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಬಲವಂತದಿಂದಲೇ ಅವರ ಒಪ್ಪಿಗೆ ಪಡೆದು ನಿಧಾನವಾಗಿ ಕಾರು ಚಲಾಯಿಸುತ್ತಾ ಮನೆ ಕಡೆ ಹೊರಟೆವು.

ಮಗು ಅದಾಗಲೇ ನಿದ್ದೆ ಮಾಡಿತ್ತು. ಕತ್ತಲೆಯಲ್ಲಿ, ಕಾಡಿನ ಮಧ್ಯೆ, ಪಕ್ಷಿ ಕೀಟಗಳ ಚಿತ್ರ ವಿಚಿತ್ರ ಶಬ್ದಗಳ ನಡುವೆ ಪತ್ನಿಯೊಂದಿಗೆ ಇಂದಿನ ದಿನದ ಒಟ್ಟು ದಿನಚರಿಯನ್ನು, ಅವರು ಬಡಿಸಿದ ಊಟದ ಸವಿಯನ್ನು ಮೆಲುಕು ಹಾಕುತ್ತಾ ಸುಮಾರು ರಾತ್ರಿ ಒಂದು ಗಂಟೆಯ ಹೊತ್ತಿಗೆ ಮನೆ ತಲುಪಿದೆವು.

ಹೀಗೆ ಒಂದು ಪುಟ್ಟ ಕುಟುಂಬದ ಭಾನುವಾರ ಎಂಬ ರಜಾ ದಿನದ ಒಂದು ದಿನಚರಿ ಓದಿಗಾಗಿ, ಬದುಕಿಗಾಗಿ, ನೆಮ್ಮದಿಗಾಗಿ, ಸಂಬಂಧಗಳ ವೃದ್ಧಿಗಾಗಿ, ಮಾನವಿಯ ಮೌಲ್ಯಗಳ ಉಳಿವಿಗಾಗಿ, ಮನಸ್ಸುಗಳ ಅಂತರಂಗದ ಚಳವಳಿಗಾಗಿ.........
ಲೇಖನ: ವಿವೇಕಾನಂದ. ಎಚ್. ಕೆ. 9844013068.......




Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ