ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಶಕ್ತಿ ಕೇಂದ್ರಗಳಿದ್ದು ಸೆಪ್ಟೆಂಬರ್ ನಂತರ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತೀಕ್ಷ್ಣವಾಗಿ ತಿಳಿಸಿದರು.
ಸಚಿವರು ಗುರುವಾರ ಮಾಧ್ಯಮಗೊಂದಿಗೆ ಮಾತನಾಡಿ, ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆ ಆಗಲಿದೆ ಎಂಬ ಊಹಾಪೋಹಗಳ ನಡುವೆ ರಾಜಣ್ಣ ನೀಡಿರುವ ಹೇಳಿಕೆ, ಸೆಪ್ಟೆಂಬರ್ ಮುಗಿಯಲಿ. ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳಾಗುತ್ತವೆ. ಸೆಪ್ಟೆಂಬರ್ ನಂತರ ಪ್ರಾರಂಭವಾಗಲಿದೆ ಎಂದು ಸಚಿವ ರಾಜಣ್ಣ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, 2013-18ರ ಅವಧಿಯಲ್ಲಿ ಕೇವಲ ಒಂದು ಶಕ್ತಿ ಕೇಂದ್ರವಿತ್ತು. ಈಗ ಒಂದು, ಎರಡು, ಮೂರು, ಎಷ್ಟು ಬೇಕೋ ಅಷ್ಟು ಶಕ್ತಿ ಕೇಂದ್ರಗಳಿವೆ ಎಂದು ರಾಜಣ್ಣ ಮಾರ್ಮಿಕವಾಗಿ ತಿಳಿಸಿದರು.
ಹಲವು ಅಧಿಕಾರ ಕೇಂದ್ರಗಳಿರುವಾಗ ಗದ್ದಲ ಹೆಚ್ಚುತ್ತದೆ, ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪರಿಸ್ಥಿತಿಗೆ ತಕ್ಕಂತೆ ಸರಕಾರ, ಪಕ್ಷವನ್ನು ನಿರ್ವಹಿಸಬೇಕಾಗುತ್ತದೆ ಎಂದರು.
ಇದೇ ವೇಳೆ ಈ ವರ್ಷದ ಅಂತ್ಯದ ವೇಳೆ ರಾಜ್ಯ ರಾಜಕೀಯದಲ್ಲಿ ಸಣ್ಣ ಪ್ರಮಾಣದಲ್ಲಿ ಬದಲಾವಣೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ನನಗೆ ಹಾಗೆ ಅನಿಸುವುದಿಲ್ಲ. ನನಗೆ ದೊಡ್ಡ ಬದಲಾವಣೆಗಳು ಕಾಣಿಸುತ್ತಿಲ್ಲ, ಆದರೆ ಬದಲಾವಣೆಗಳಿರಬಹುದು ಎಂದರು.
ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಅಧಿಕಾರ ಹಂಚಿಕೆ ಒಪ್ಪಂದವನ್ನು ಉಲ್ಲೇಖಿಸಿ ಈ ವರ್ಷಾಂತ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ರಾಜಕೀಯ ವಲಯಗಳಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಕೆಲವು ಸಮಯದಿಂದ ಊಹಾಪೋಹಗಳಿವೆ. ಆದರೆ ಪಕ್ಷದ ಹೈಕಮಾಂಡ್‌ನಿಂದ ಖಡಕ್ ಸೂಚನೆಯ ನಂತರ ಅಂತಹ ಮಾತುಗಳು ಹಿಂದೆ ಸರಿದಿವೆ. ಶಿವಕುಮಾರ್ ಹೊಂದಿರುವ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಊಹಾಪೋಹಗಳಿದ್ದು ಎಲ್ಲರ ಚಿತ್ತ ಹೈಕಮಾಂಡ್ ಕಡೆ ಹರಿದಿದೆ.


