Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಮಾಲಿಗಳೆಂದರೆ ದನಗಳಂತೆ ನೋಡುತ್ತಿದ್ದ ಕಾಲವದು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು 67-ಸಂಘಟನೆಗಳಿಲ್ಲದ ಸಂದರ್ಭ
, ಹಮಾಲಿಗಳೆಂದರೆ ಜಾನುವಾರುಗಳಂತೆ, ನೋಡುತ್ತಿದ್ದ ಕಾಲವದು. ಧಣಿಗಳ ಅರಸೊತ್ತಿಗೆಗಳು, ನನ್ನನ್ನೂ ಬಿಡದೆ ಕಾಡಿವೆ. ಕಾಳು ತುಂಬಿದ ಕ್ವಿಂಟಲ್ ಗೂ ಹೆಚ್ಚಿನ ತೂಕದ ರಾಗಿ, ಜೋಳ, ಉರುಳಿ, ತೊಗರಿ, ಹೆಸರು, ಎಳ್ಳು, ಉದ್ದು, ಮುಂತಾದ ಮೂಟೆಗಳು, ಬಸ್ ಟಾಪಿನ ಮೇಲೆ, ಟ್ರ್ಯಾಕ್ಟರ್ ಗಳಲ್ಲಿ, ಮತ್ತು ಚಕ್ಕಡಿ ಬಂಡಿಗಳಲ್ಲಿ ಮಾರುಕಟ್ಟೆಗೆ ಬರುತ್ತಿದ್ದವು.

ಇವು ಎಷ್ಟು ಅಪಾಯಕಾರಿ ಅಂದ್ರೆ, ಮೇಲೊಬ್ಬ ಹತ್ತಿ,ತನ್ನ ಶಕ್ತಿಯಿಂದ ರಟ್ಟೆ ಬಳಸಿ, ನಿಧಾನವಾಗಿ ಮೂಟೆ ಬಿಡಬೇಕು. ಕೆಳಗಿದ್ದವ ಹೆಗಲುಕೊಟ್ಟು ಹೊತ್ತು ನಿಟ್ಹಾಕಬೇಕು. ಇಲ್ಲಿ ಅಪಾಯವೆಂದರೆ ಮೈಯ್ಯಿಗಾಗುವ ಗಾಯದ ಮಾತಲ್ಲ, ಕೆಳಗಿದ್ದವನಿಗೆ ಮೇಲಿಂದ ಬರುವ, ಮೂಟೆಯನ್ನ ತಡೆದು, ಹೆಗಲು ಕೊಡದೆ ಹೋದ್ರೆ, ಮರುದಿನ ಅವನಿಗೆ ಕೆಲಸವೇ ಇರುತ್ತಿರಲಿಲ್ಲ.

 ಕೈಲಾಗದವನಿಗೆ, ಊಟವಿಲ್ಲದಂತಹ ಅಪಾಯದ ದಿನಗಳವು. ನನ್ನ ಜೊತೆ ಮೂಟೆ ಹೊತ್ತ ಅನೇಕರು ಕೆಲಸ ಬಿಟ್ಟು, ಇನ್ನೆಲ್ಲಿಯೋ ಕಸ ಗುಡಿಸಿ, ಜೊತೆ ಕೆಲಸಗಾರರ ಬಳಿ ಕಾಡಿ ಬೇಡಿ, ಒಂದಿಷ್ಟು ಕಾಳು ಪಡೆದು ಜೀವನ ಸಾಗಿಸಿದ್ದಾರೆ. ಗಟ್ಟಿ ಮೂಟೆಗಳ ಜೊತೆ ಯುದ್ಧದೋಪಾದಿಯ ಬದುಕಿನಲ್ಲಿ, ಕಳೆದು ಮಣ್ಣಾದವರೂ ಇದ್ದಾರೆ. ಇವೂ ನನ್ನನ್ನೂ ಸಹ ಬಹುವಾಗಿ ಬೆದರಿಸಿವೆ, ಎಚ್ಚರಿಸಿವೆ.

ಆ ದಿನಗಳಲ್ಲಿ ಬರೆದ ಕವನ
"ಹಮಾಲಿ"
ನಾ ನಿನ್ನ
ನೋಡ ನೋಡುತ್ತಲೇ
ದಶಕಗಳ ಕಳೆದಿದ್ದೇನೆ
ಅಂದಿನ ಆ ರಟ್ಟೆಯ ಗತ್ತಲಿ
ಗಟ್ಟಿಮೂಟೆ ಎಂಬುದು ಮಾಮೂಲಿ
ಸೂರ್ಯನೇರುವ ಹೊತ್ತಿಗೆ
ಹೊರುವ ಕಾಯಕ ತಪ್ಪಿದ್ದಲ್ಲ
ಬೆವರಿಗೆ ಬಂದ ಹಣ
ಬಾರ್ ಹೋಟಲ್ಗಳಿಗೆ ಬಸಿದು
ಗೂಡು ಸೇರೋ ಹೊತ್ತಿಗೆ ಖಾಲಿ
ನಿಯತ್ತಿಗೆ ಮತ್ತೊಂದೆಸರಿದು
ದುಡಿದದ್ದೇ ದುಡಿದದ್ದು
ದಣಿವರಿಯದ ದಾರಿಯಲಿ
ಗುಲಾಮಿ ಪುಟಗಳಲಿ
ಜೀತದ ಸಂತೆಯೊಳು
ನಡುಕಟ್ಟಿನಿಂತ ಹೋರಿಗಳು
ಎಲುಬು ಹೊದ್ದ ತೊಗಲುಗಳು ಗುಳಿಬಿದ್ದ ಕಣ್ಗಳು ರಟ್ಟೆಬಿದ್ದಿವೆ
ತಾಕತ್ತಿಲ್ಲದ ನಾಯಿಗಳಿವು
ನಮಗೇಕೆಂದವರೆಷ್ಟೋ
ಕೆಲಸವಿಲ್ಲದ ನನ್ನೆಷ್ಟೋ ಜನ
ಮಾಂಸದ ಅಂಗಡಿಗೆ
ಕಟ್ಟಿದ ಎತ್ತುಗಳಾದರು
ರಸ್ತೆಗಳಲಿ
ತುತ್ತು ಕೂಳಿಗೆ ಬಿಕರಿಯಾದರು
ಮಂದಿಯೊಳಗೆ
ತುಚ್ಚ ಪದಗಳಿಗೆ ವಸ್ತುವಾದರು
ದುಡಿದ ಮಳಿಗೆಗಳಲಿ
ಕೈಚಾಚಿ ತಳ್ಳಿಸಿಕೊಂಡರು
ತಳ್ಳಿದವರು ನಾವೇ
ಮುಂದೊಂದು ದಿನ
ನನ್ನ ದೂಡಲು
ನನ್ನವರಲ್ಲೊಬ್ಬ.......


 ಅಸಹ್ಯದ ಬದುಕಿದು, ಆಸರೆ ಕೊಟ್ಟ ಒಬ್ಬ ಹಿರಿಯನನ್ನ ನಾನೇ ಸಹಿಸುತ್ತಿರಲಿಲ್ಲ. ಕಾರಣ ಸವೆದು ಸೋತಿದ್ದವ, ಆತನಿಗೆ ಗಟ್ಟಿ ಕೆಲಸ ಮಾಡಲು ಆಗುತ್ತಿರಲಿಲ್ಲ,ಕಷ್ಟ ಪಟ್ಟ ಹಣವನ್ನ ಸುಖಾಸುಮ್ಮನೇ ಇನ್ನೊಬ್ಬರಿಗೆ ಕೊಡಬೇಕೆನ್ನುವ ಮನಸ್ಸು ಸಹ ನಮಗೂ ಇರುತ್ತಿರಲಿಲ್ಲ.

ಧಣಿ ಎನಿಸಿಕೊಂಡವನು,ತನ್ನ ಅಂಗಡಿಯಲ್ಲೇ ಬದುಕಿನುದ್ದಕ್ಕೂ ಜೀವ ತೆತ್ತವನನ್ನ,ಹತ್ತಿರಕ್ಕೂ ಸೇರಿಸಿದೆ ನಮ್ಮಿಂದಲೇ ತಳ್ಳಿಸಿದ್ದ.ನಮಗೆಲ್ಲಾ ಕೆಲಸಕ್ಕಿಟ್ಟುಕೊಂಡಿದ್ದ ಆ ಹಿರಿಯ,ನಮ್ಮನ್ನ ನೋಡುತ್ತಲೇ ಮೌನವಾಗಿಯೇ ಸರಿದ. ಅದು ಈಗಲೂ ನನಗೆ ಬಿರುಸಾಗಿ ತಳ್ಳಿದಂತಾಗಿ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತದೆ.

ತಂದೆಯ ಕಾಲದಿಂದಲೂ ಅಂಗಡಿ ಹುಟ್ಟಿದಾಗಿನಿಂದ,ನಿಯತ್ತಾಗಿ ದುಡಿದಿದ್ದವ,ಆತ ಮಣ್ಣಾಗುವ ದಿನ ನೋಡಲು ಬಂದ ಧಣಿ,ಐದು ರೂಪಾಯಿಯ ಒಂದು ಹಾರ ಶವದ ಮೇಲಾಕಿ ಕ್ಷಣ ಮಾತ್ರ ನಿಲ್ಲದೆ ಸರಿದಿದ್ದ. ಒಂದು ಐನೂರಾದರೂ ಕೊಟ್ಟಿದ್ದರೆ, ಆತನ ಕುಟುಂಬಕ್ಕೆ ದಿವಸದ ಖರ್ಚಿಗಾದರು ಆಗುತ್ತಿತ್ತೇನೋ ಅನ್ನುವ ಆಸೆ ನನಗಿತ್ತು.

ತನ್ನ ಜೀವಿತದ ಇಡೀ ಅಮೂಲ್ಯದ ಬದುಕು ಒಂದು ಹಾರದಲ್ಲಿ ಬಿದ್ದುಹೋಗಿತ್ತು. ಮತ್ತೆ ಮತ್ತೇ ನೆನಪಾಗುವ ಆ ಕ್ಷಣ, ಇಂದಿಗೂ ನನ್ನಿಂದ ಮರೆಯಲಾಗುತ್ತಿಲ್ಲ. ಆಸ್ತಿ, ಅಂತಸ್ತು, ಹೊಲ, ಮನೆ, ಯಾವುದೂ ಇಲ್ಲದವರು. ರಟ್ಟೆಯ ಆಸರೆಯೊಂದಿಗಿನ ಬದುಕು, ಸಮವಾಗಿ ನಿಲ್ಲದಿದ್ದರೆ ಬಿಡಿಸುತ್ತಾರೆಂಬ ಭಯ, ಹಾಗಾಗಿಯೇ ನನ್ನೊಂದಿಗಿದ್ದ ಹಮಾಲ ಗೆಳೆಯರೆಲ್ಲರೂ ಊಟಕ್ಕೆ ಆದ್ಯತೆ ಕೊಡುತ್ತಿದ್ದೆವು.

ದಷ್ಟಪುಷ್ಟವಾಗಿದ್ದರೆ ಕಷ್ಟ ಬರಲಾರದು ಅಂತ, ಬೇರೆ ದಾರಿಯೇ ಇಲ್ಲ, ಗಟ್ಟಿ ಮುಟ್ಟಾಗಿರಬೇಕು ಅಂದ್ರೆ, ಅದಕ್ಕಾಗಿ ಊಟ ಮಾಡಲೇಬೇಕಿತ್ತು. ಈ ಕೆಲಸದಲ್ಲಿ ನಮ್ಮೊಂದಿಗಿದ್ದ ಬಹುತೇಕರು, ದಣಿದು ಮೈ ನೋವಿಗೆ ಕುಡಿದು ಮಲಗುತ್ತಿದ್ದವರೇ ಹೆಚ್ಚು, ಅಷ್ಟೆಲ್ಲ ಕೆಲಸ ಮಾಡಿದ್ರೂ, ನಮ್ಮಲ್ಲಿ ಕೆಲವರು ಗರಡಿಮನೆ ವ್ಯಾಯಾಮವನ್ನು ಬಿಟ್ಟಿರಲಿಲ್ಲ, ಪ್ರತಿ ದಿನ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ (NH 4)ನಾಲ್ಕರಲ್ಲಿ ಬರುವ ಕಾತ್ರಳ್ ಕ್ರಾಸ್ ವರೆಗೂ ಓಡಿ, ಅಲ್ಲಿ ಸಿಗುತ್ತಿದ್ದ ಈಚಲ ನೀರಾವನ್ನ ಕುಡಿದು ಬರುತ್ತಿದ್ದೆವು.

ತಾಯಿಯ ಹಾಲಿಗೆ ಸಮ ಅಂತ ಬಹಳ ಮಂದಿ ಕುಡಿತಾಯಿದ್ರು, ಬಿಸಿಲಿಗೆ ಹೆಂಡವಾಗುವ ಅದು ಬೆಳಗಿನ ಜಾವದಲ್ಲಿ ಅವ್ವನ ಎದೆ ಹಾಲೇ. ಮಾರುಕಟ್ಟೆಗೆ ಸೇರಿದ ಹದಿನೈದು ವರ್ಷಗಳು, ನನ್ನ ಜೊತೆ ಗೆಳೆಯರಿಗೆಲ್ಲಾ ಮಾರುಕಟ್ಟೆಯೇ ಮನೆ, ವಾರಕ್ಕೊಮ್ಮೆ ಮನೆಗೆ ಬಂದ್ರೆ ಹೆಚ್ಚಾಯ್ತು. ನನ್ನ ಆ ದಿನಗಳ ಬದುಕಿನ ಬಹು ಭಾಗದ ಊಟ, ರೆಹಮಾನ್ ಕಾಕನ ಹೋಟೆಲ್ ನಲ್ಲಿಯೇ.

ಬಹುತೇಕ ಹಮಾಲ ಗೆಳೆಯರು ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ  ಸಹೋದರಿಯರಿಗೆ, ರೆಹಮಾನ ಕಾಕಾ ಮಕ್ಕಳಂತೇ ಸಾಕಿ, ಸಲಹಿ, ತನ್ನ ಬದುಕನ್ನೂ ನಮ್ಮ ಜೊತೆಯಲ್ಲಿಯೇ ಕಟ್ಟಿಕೊಂಡಿದ್ದ. ಸೇರ್ವ ರೊಟ್ಟಿ, ಆಮ್ಲೆಟ್, ಅಂಡ ಮಸಾಲ, ಖಷ್ಕ, ನೀರುಳ್ಳಿ ವಡೆ, ಸೀ ಬೋಂಡ, ಒಮ್ಮೊಮ್ಮೆ ಮೀನು, ಮಾಂಸ, ತರಹೇವಾರಿ ಖಾದ್ಯಗಳು, ಇಂದಿಗೂ ನೆನಸಿಕೊಂಡರೆ ಬಾಯಲ್ಲಿ ನೀರೂರುತ್ತವೆ. ನಮ್ಮ ರಟ್ಟೆಯನ್ನ ಗಟ್ಟಿಮಾಡಿ, ಮೂಟೆಯ ಎದುರು ಜಟ್ಟಿಯಾಗಿಸಿದ್ದು ಇದೇ ರೆಹಮನ್ ಕಾಕನ ಹೋಟಲ್ಲೇ, ಮಗಳ ಮದುವೆಗಾಗಿ ನಮ್ಮೆಲ್ಲರನ್ನ ಕೇರಳಕ್ಕೂ ಕರೆದೊಯ್ದಿದ್ದ.

ಬುರುಜಿನಟ್ಟಿಯ ಈಶಣ್ಣ, ಚಂದ್ರಶೇಖರ್, ಮುನ್ನಣ್ಣ, ಚೆನ್ನತ್ತಿ ಗುಂಡಿಯ ಕಾಸಿಮ್, ಗೊಪ್ಗನಳ್ಳಿಯ ಓಬಣ್ಣ, ಸಜ್ಜನಕೆರೆ ಬೋವಿ ಈರಪ್ಪ, ಗೆಜ್ಜಲೆರಟ್ಟಿಯ ಬಸಯ್ಯ, ತಳಗಾಳಿಗೆ ಕೆಲಸ ಮಾಡುತ್ತಿದ್ದ ರಮೇಶ, ಹೇಮ, ಮಂಜುಳ ಹಾಗೂ ನಾನೂ ಸೇರಿ, ಒಂದಂಗಡಿಯಲ್ಲಿ ಹಗಲು ರಾತ್ರಿ ಹದಿನೈದು ವರ್ಷ ಬೆವರು ಹರಿಸಿದವರು. ಇವರೆಲ್ಲರಲ್ಲಿ ನನ್ನ ಜೊತೆ, ಈಗ ಚಂದ್ರಶೇಖರ್ ಬಿಟ್ರೆ ಯಾರೂ ಉಳಿದಿಲ್ಲ.

ಗಟ್ಟಿ ಮೂಟೆಗಳಲ್ಲೇ, ಕರಗಿ ಕಣ್ಮರೆಯಾಗಿ ಬಹಳ ವರ್ಷಗಳೇ ಆದವು. ಪ್ರಾರಂಭದಲ್ಲಿ ಮಾತು ಕೇಳುತ್ತಿದ್ದ ಮೂಟೆಗಳು, ಬರ ಬರುತ್ತಾ ಬಿರುಸಾಗಿ ಗುದ್ದುತ್ತಿದ್ದವು, ಕಡೆಗೆ ಅಂಗಡಿಯಿಂದ ದೂಡಿಸಿ ಬಿಡುತ್ತಿದ್ದವು. ನಾನಂತೂ ನನ್ನ ಹಾಗೂ ಮೂಟೆಯ ಗುದ್ದಾಟದಲ್ಲಿ ಗೆದ್ದಿದ್ದೇನೆ ಎಂಬ ಆತ್ಮವಿಶ್ವಾಸದಿಂದ ಇಂದಿಗೂ ಬೀಗುತ್ತೇನೆ.

ಅದು ಸೋಲಿಸಲಾಗಲಿಲ್ಲವೆಂಬಂತೆ ನನ್ನ ದುರುಗುಟ್ಟುತ್ತಿರುತ್ತದೆ, ನಾನು ನಕ್ಕು ಹುಬ್ಬೇರಿಸುತ್ತೇನೆ,ಇದರ ಭಯವಿಲ್ಲದಿದ್ದರೆ ನಾನು ಏನಾಗುತ್ತಿದ್ದೆನೋ!ಏನೋ? ಗೊತ್ತಿಲ್ಲ,ಆದರೆ ಛಲಧಂಕನಾಗಿ ಹಾದಿ ಸವಿಸಿದ್ದೇನೆ, ಸಂಕಷ್ಟಗಳ ಮಧ್ಯೆಯೂ ಸಂತೋಷವಿಟ್ಟುಕೊಂಡ ದಿನಗಳವು, ಕಬ್ಬಡ್ಡಿ ತಂಡ ಕಟ್ಟಿದ್ದೆವು, ರಂಗಭೂಮಿಯ ನಂಟಂತೂ ಅಪಾರವಾಗಿತ್ತು. ಹಮಾಲರ ಸಂಘದಿಂದ ವರ್ಷಕ್ಕೊಂದು ನಾಟಕ, ಇಂತಹ ಒತ್ತಡದ ಬದುಕಿನಲ್ಲೂ ನಮ್ಮೊಳಗಿನ ಖುಷಿಯೂ ಅರಳುತ್ತಿದ್ದವು, ಅಕ್ಷರಗಳಿಗೆ ತವಕಿಸುತ್ತಿದ್ದ ನನಗೆ,ರಂಗಭೂಮಿಯೇ ನನ್ನ ಬರವಣಿಗೆಗೆ ರಹದಾರಿ.

ಹಮಾಲರ ಸಂಘದಿಂದ ಆಡಿದ ಬಹುತೇಕ ನಾಟಕಗಳಲ್ಲಿ ನನ್ನದು ಖಳನಾಯಕನ ಪಾತ್ರ,ನನ್ನ ಪಾತ್ರಗಳಿಗೆ ರುಚಿಕಟ್ಟಾದ ಸಂಭಾಷಣೆಯನ್ನು ನಾನೇ ಬರೆದುಕೊಳ್ಳುತ್ತಿದ್ದೆ, ನಮ್ಮೊಂದಿಗೆ ಸಹ ಕಲಾವಿದೆಯರಾಗಿ, ಆಗಿನ ಅಮೆಚೂರ್ ರಂಗಭೂಮಿಯ ನಟಿಯರಾದ ಭಾರತಿ, ಭುವನೇಶ್ವರಿ, ವೈಜಯಂತಿ, ಹುಳಿಯಾರ್ ಮಂಜುಳ, ಹಿರಿಯೂರು ಬೇಬಿ, ದುರ್ಗದ ಶಾಂತ, ನಾಟಕದ ಹಾರ್ಮೋನಿಯಂ ಗುರುಗಳಾಗಿ ಗಂಜಗಟ್ಟೆ ತಿಪ್ಪೇಸ್ವಾಮಿ, ಹಾಯಿತೋಳು ವಿರೂಪಾಕ್ಷಪ್ಪ, ಚಳ್ಳಕೆರೆ ಕಾಟಪ್ಪನಟ್ಟಿಯ ತಿಪ್ಪೇಸ್ವಾಮಿ ಗುರುಗಳು, ನಾಟಕ ನಿರ್ದೇಶಕರಾಗಿ ಮೆಹಬೂಬ್ ಸುಭಾನ್, ಕಲಾವಿದರಾಗಿ ಹೊನ್ನೂರಪ್ಪ, ರೈಲ್ವೆ ಇಲಾಖೆಯ ಕುಬೇರ್, ಇವರೆಲ್ಲ ರಂಗಭೂಮಿಯ ವಿಚಾರದಲ್ಲಿ ಹತ್ತಿರದಲ್ಲಿದ್ದವರೇ.

ರಚನಾ ಹವ್ಯಾಸಿ ಕಲಾ ಸಂಘ ಪರಿಚಯವಾಗಿ, ಪ್ರಾಯೋಗಿಕ ರಂಗ ನಿರ್ದೇಶಕ ಜಿಲ್ಲಾ ಆಸ್ಪತ್ರೆಯ ಉದ್ಯೋಗಿ ತಿಪ್ಪೇಸ್ವಾಮಿ, ಹಾಗೂ ಎಲ್ಐಸಿ ಅಧಿಕಾರಿ ಆರ್ ಶೇಷಣ್ಣಕುಮಾರ್, ಇವರ ಜೊತೆಗೂಡಿ ಆ ದಿನಗಳಲ್ಲಿ, ದುರ್ಗದಲ್ಲಿ ರಂಗ ವೈಭವವನ್ನೇ ಸೃಷ್ಟಿಸಿದ್ದು ಮರೆಯಲಾದೀತೆ.

ಹವ್ಯಾಸಿ ರಂಗಭೂಮಿಯ ನನ್ನ ಜೀವಮಾನದ ಶ್ರೇಷ್ಠನಾಟಕ "ಕರ್ಣಭಾರ"ಇದರಲ್ಲಿ ನನ್ನದು ರಕ್ಕಸನ ಪಾತ್ರ, ಶೇಷಣ್ಣನದು ಇಂದ್ರನ ಪಾತ್ರ, ಬೆಂಗಳೂರು ಸುಬ್ರಹ್ಮಣ್ಯ ಸಾರಥಿಯಾಗಿ, ಸಾಂಬಶಿವ ದಳವಾಯಿ ಕರ್ಣನಾಗಿ ಅಭಿನಯಿಸಿದ್ದೆವು. ಗೋಪಾಲಕೃಷ್ಣ ನಾಯರಿ ನಿರ್ದೇಶನದ,ಅಪರೂಪದ ಮಹತ್ವದ ನಾಟಕವಿದು, ಆಸನಗಳಿಲ್ಲದೆ, ದ್ವನಿವರ್ಧಕಗಳಿಲ್ಲದೆ,ಬರೀ ಹಣತೆಯ ಬೆಳಕಿನಲ್ಲಿಯೇ ಈ ರಂಗ ಪ್ರಯೋಗ ನಡೆಸಿದ್ದು ಅವಿಸ್ಮರಣೀಯ.
ಮುಂದುವರೆಯುವುದು.....
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ