ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ತುಂಗಭದ್ರಾ ಜಲಾಶಯದ ಸುರಕ್ಷತೆ ಹಾಗೂ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳಲಾದ 33 ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮೂಲಕ ಜಲಾಶಯವು ಮುಂದಿನ 50 ವರ್ಷಗಳ ಕಾಲ ಸುಭದ್ರವಾಗಿರಲಿದ್ದು, ಟೀಕೆ ಮಾಡಿದವರಿಗೆ ಕೆಲಸದ ಮೂಲಕವೇ ಉತ್ತರ ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಲಾಶಯದ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಮುಖ ಅಂಶಗಳನ್ನು ಹಂಚಿಕೊಂಡರು.
ಗೇಟ್‌ಗಳ ಅಳವಡಿಕೆ: ಜಲಾಶಯದ ಎಲ್ಲಾ 33 ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಮೇ 7ರೊಳಗೆ ಬಾಕಿ ಇರುವ ಅಲ್ಪಸ್ವಲ್ಪ ಕೆಲಸಗಳನ್ನು ಮುಗಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ.
ಉದ್ಘಾಟನೆ: ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 15ರಂದು ನೂತನ ಗೇಟ್‌ಗಳ ಅಧಿಕೃತ ಉದ್ಘಾಟನೆ ನೆರವೇರಲಿದೆ.
ವೆಚ್ಚದ ವಿವರ: ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ಈವರೆಗೆ 54 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಾಲುವೆಗಳ ದುರಸ್ತಿ ಸೇರಿದಂತೆ ಒಟ್ಟು ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 315 ಕೋಟಿ ರೂ. ವ್ಯಯಿಸಲಾಗಿದೆ.
ತಾಂತ್ರಿಕ ಸುಧಾರಣೆ: ಕೇವಲ ಗೇಟ್ ಮಾತ್ರವಲ್ಲದೆ, ಗೇಟ್‌ಗಳ ಚೈನ್‌ಗಳನ್ನು ಸಹ ಬದಲಾಯಿಸಲು ಸೂಚಿಸಲಾಗಿದೆ. ಹೊಸ ಚೈನ್‌ಗಳು ಮೇ 7ರಂದು ಸ್ಥಳಕ್ಕೆ ತಲುಪಲಿವೆ.
ರೈತರಿಗೆ ಸಿಗಲಿರುವ ಅನುಕೂಲ:
ಈ ಯೋಜನೆಯಿಂದ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಸುಮಾರು 7.5 ಲಕ್ಷ ರೈತರಿಗೆ ನೇರ ಅನುಕೂಲವಾಗಲಿದೆ. "ಜಲಾಶಯದ ದುರಸ್ತಿಗಾಗಿ ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿದ್ದಾರೆ, ಅವರಿಗೆ ನನ್ನ ಕೋಟಿ ನಮಸ್ಕಾರಗಳು" ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ನೀರಿನ ಸಂಗ್ರಹದ ನಿರೀಕ್ಷೆ:
ಪ್ರಸ್ತುತ ಜಲಾಶಯದಲ್ಲಿ 10.5 ಟಿಎಂಸಿ ನೀರಿದೆ. ಮುಂದಿನ ಎರಡು ತಿಂಗಳಲ್ಲಿ ಉತ್ತಮ ಮಳೆಯಾದಲ್ಲಿ ಜಲಾಶಯಕ್ಕೆ 44 ಟಿಎಂಸಿ ನೀರು ಹರಿದು ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
"ಇದು ದೇಶಕ್ಕೇ ಮಾದರಿಯಾದ ಕೆಲಸ. ರೈತರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಈ ಬೃಹತ್ ಕಾರ್ಯ ಸಾಧ್ಯವಾಗಿದೆ. ಸಂಪೂರ್ಣ ಕಾಮಗಾರಿ ಮುಗಿದ ನಂತರ ನಾಲ್ಕು ಜಿಲ್ಲೆಗಳ ರೈತರನ್ನು ಆಹ್ವಾನಿಸಿ ವಿಜೃಂಭಣೆಯಿಂದ ಉದ್ಘಾಟನೆ ಮಾಡಲಾಗುವುದು."
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿಗಳು.


