ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಜೂನ್ 20ರಂದು ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ “ಉಚಿತ ಮೂತ್ರಕೋಶ ತಪಾಸಣಾ ಶಿಬಿರ” ನಡೆಯಲಿದೆ.
ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೂತ್ರಕೋಶ ತಜ್ಞ ವೈದ್ಯರಾದ (ಯುರಾಲಾಜಿಸ್ಟ್) ಡಾ.ಯು.ಎಸ್.ಕಾರ್ತಿಕ್ ಅವರು ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವೆಗೆ ಶಿಬಿರದಲ್ಲಿ ಲಭ್ಯವಿದ್ದು, ಮೂತ್ರಕೋಶ ತಪಾಸಣೆ ನಡೆಸುವರು.
ಮೂತ್ರಪಿಂಡದಲ್ಲಿ ಕಲ್ಲು, ಹರಳು (ಕಿಡ್ನಿಸ್ಟೋನ್), ಪದೇ ಪದೇ ಮೂತ್ರ ವಿಸರ್ಜನೆ, ಪ್ರೋಸ್ಟೇಟ್‍ನ ಮೂತ್ರದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದಲ್ಲಿ ಸೋಂಕು, ಉರಿ ಮೂತ್ರ, ಮೂತ್ರದಲ್ಲಿ ರಕ್ತ ಕಾಣಿಸುವುದು, ಪುರುಷರ ಬಂಜೆತನ, ಚಿಕ್ಕ ಮಕ್ಕಳ ಮೂತ್ರದ ತೊಂದರೆಗಳು, ತಡೆದ ಮೂತ್ರ ಇತ್ಯಾದಿ ಮೂತ್ರಕೋಶ ಕಾಯಿಲೆಯ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9535025743, 7259759982 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಎಸ್.ಬಸವರಾಜಪ್ಪ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2026-27ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.
1ನೇ ತರಗತಿಯಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆಸಕ್ತರು ರಾಜ್ಯ ವಿದ್ಯಾರ್ಥಿ ವೇತನ ಫೋರ್ಟಲ್‍ನ ಲಿಂಕ್ https://ssp.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿ, ವಿದ್ಯಾರ್ಥಿವೇತನ ಮಂಜೂರಾದ ವಿದ್ಯಾರ್ಥಿಗಳ ಅರ್ಜಿಗಳನ್ನು ‘ಆಟೋ ರಿನ್ಯೂವಲ್' ಎಂದು ಪರಿಗಣಿಸಲಾಗುವುದರಿಂದ ಇಂತಹ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ, ಕಳೆದ ವರ್ಷ ಅರ್ಜಿ ಸಲ್ಲಿಸಿಯೂ ವಿದ್ಯಾರ್ಥಿವೇತನ ಮಂಜೂರಾಗದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ 1ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರುವ ಬಗ್ಗೆ ಹಾಗೂ NPCI ಮ್ಯಾಪಿಂಗ್ ಸಕ್ರಿಯವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ/ತಾಲೂಕು ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.



