ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹುಬ್ಬಳ್ಳಿಯಲ್ಲಿ ಬಂಧನಕ್ಕೆ ಪ್ರತಿರೋಧಿಸಿದ ಪಕ್ಷದ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಮಾಧ್ಯಮಗಳ ವರದಿಗಳು, ಆತಂಕಕಾರಿ ಮಾತ್ರವಲ್ಲ, ಸಮಸ್ತ ನಾಗರೀಕ ಸಮಾಜವೇ ತಲೆತಗ್ಗಿಸಬೇಕಾದ ಹೀನ ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಕಾರಣ ಏನೇ ಇರಲಿ, ಈ ನೆಲದ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಗೌರವ ಎನ್ನುವುದು ಕೇವಲ ಮಾತಲ್ಲ, ಅದು ನಮ್ಮ ಪರಮೋಚ್ಚ ಆದ್ಯತೆ. ಪರಿಸ್ಥಿತಿ ಏನೇ ಇರಲಿ, ಒಬ್ಬ ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಸನ್ನಿವೇಶಕ್ಕೆ ಅವಕಾಶ ನೀಡಿದ್ದು ವ್ಯವಸ್ಥೆಯ ಲೋಪವಾಗಿದೆ. ಇಂತಹ ಅವಮಾನಕಾರಿ ಘಟನೆಗಳು ನಮ್ಮ ಕರ್ನಾಟಕದ ಘನತೆಗೆ ಕುಂದುಂಟುಮಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ 'ಜಂಗಲ್ ರಾಜ್' ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಬೇಕಾದರೂ ಗೋಲಿಬಾರ್ ನಡೆಸಬಹುದು, ಕೊಲೆ ಮಾಡಬಹುದು, ಹಿಂದೂಗಳ ಧಾರ್ಮಿಕ ಮೆರೆವಣಿಗೆ ಮೇಲೆ ಕಲ್ಲು ತೂರಾಟ ನಡೆಸಬಹುದು, ಇಲ್ಲಿ ಎಷ್ಟು ಬೇಕಾದರೂ ಡ್ರಗ್ಸ್ ತಯಾರಿಸಬಹುದು, ನಮ್ಮ ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಾಗಿದೆ.
ಹುಬ್ಬಳ್ಳಿಯ ಈ ಅಮಾನವೀಯ ದೌರ್ಜನ್ಯ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆಯ ಅಧಃಪಾತಕ್ಕೆ ದುರಂತ ಸಾಕ್ಷಿಯಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ,
ಮಹಿಳೆಯರ ಘನತೆಗೆ ಕುಂದು ತರುವ ಘಟನೆಗಳು ಯಾವುದೇ ಕಾರಣವಿರಲಿ, ಮರುಕಳಿಸದಂತೆ ನೋಡಿಕೊಳ್ಳುವ ತನ್ನ ಕನಿಷ್ಠ ಜವಾಬ್ದಾರಿಯನ್ನಾದರೂ ರಾಜ್ಯ ಸರ್ಕಾರದ ನಿರ್ವಹಿಸಲಿ ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.


