ಚಂದ್ರವಳ್ಳಿ ನ್ಯೂಸ್, ನವದೆಹಲಿ:
80ನೇ ಸ್ವಾತಂತ್ರ್ಯ ಮಹೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಸಂಖ್ಯ ಹಿರಿಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬಳಿಕ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ ರಾಷ್ಟ್ರೀಯ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೇಶ ಉದ್ದೇಶಿತ ಭಾಷಣವನ್ನು ಆಲಿಸಿದರು.
ವಿಕಸಿತ ಭಾರತಕ್ಕೆ ಯುವಶಕ್ತಿ ಆಧಾರ: ‘ವಿಕಸಿತ ಭಾರತ 2047’ ತಲುಪುವಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬ ಪ್ರಧಾನಿಯವರ ಕರೆ ಉಲ್ಲೇಖಿಸಿದ ಕುಮಾರಸ್ವಾಮಿ, ನಾಳೆಯ ಭಾರತವು ಯುವಜನತೆಯ ನಾವೀನ್ಯತೆ ಹಾಗೂ ಸಂಕಲ್ಪದಿಂದ ರೂಪುಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕೈಗಾರಿಕಾ ಪ್ರಗತಿ ಹಾಗೂ ಆತ್ಮನಿರ್ಭರತೆ: ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಯನ್ನಾಗಿ ಮಾಡುವ ಸಂಕಲ್ಪಕ್ಕೆ ಪ್ರಧಾನಿಯವರ ಭಾಷಣವು ಬಲ ತುಂಬಿದೆ.
2047ರ ಗುರಿ: ಸ್ವಾತಂತ್ರ್ಯ ಹೋರಾಟಗಾರರ ಕನಸಿನಂತೆ ಭಾರತವನ್ನು ಅಭಿವೃದ್ಧಿ ಹೊಂದಿದ, ತಾಂತ್ರಿಕವಾಗಿ ಮುನ್ನಡೆದ ಹಾಗೂ 'ಆತ್ಮನಿರ್ಭರ ಭಾರತ'ವನ್ನಾಗಿ ನಿರ್ಮಿಸಲು ಪ್ರತಿಯೊಬ್ಬರೂ ಒಗ್ಗೂಡಿ ಶ್ರಮಿಸಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.



