ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರೂ. 2,000 ಕ್ಕಿಂತ ಹೆಚ್ಚಿನ ನಿರ್ದಿಷ್ಟ ಯುಪಿಐ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಈ ಕುರಿತು ವಕೀಲ ಅಂಜನ್ ದತ್ತ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಕಾನೂನು ಚೌಕಟ್ಟಿಗಿಂತ ಹೆಚ್ಚಾಗಿ ತಾಂತ್ರಿಕ ಮತ್ತು ಆರ್ಥಿಕ ನೀತಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ಈ ವ್ಯವಸ್ಥೆ ಕುರಿತು ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಎನ್‌ಪಿಸಿಐಗೆ ನೋಟಿಸ್ ಜಾರಿ ಮಾಡಿದೆ. ಇದರಿಂದಾಗಿ ಅಕ್ಟೋಬರ್ 15, 2026 ರಿಂದ ಜಾರಿಗೆ ಬರಲಿರುವ ಹೊಸ ನಿಯಮಕ್ಕೆ ಯಾವುದೇ ತಡೆಯಿಲ್ಲದಂತಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದ್ದು, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಹೊಸ ಎಂಆರ್‌ಡಿ ವ್ಯವಸ್ಥೆಯನ್ನು ಅಮಾನತುಗೊಳಿಸುವಂತೆ ಅರ್ಜಿದಾರರು ಮಾಡಿದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.
ಶೇ. 96ರಷ್ಟು ವಹಿವಾಟುಗಳಿಗೆ ವಿನಾಯಿತಿ: ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಯುಪಿಐ ವ್ಯವಸ್ಥೆಯಲ್ಲಿನ ಶೇ. 96ರಷ್ಟು ವಹಿವಾಟುಗಳು ಈ ಶುಲ್ಕದಿಂದ ಹೊರತಾಗಿಯೇ ಉಳಿಯಲಿವೆ ಎಂದು ಪೀಠಕ್ಕೆ ತಿಳಿಸಿದರು.
ಸಾಮಾನ್ಯರಿಗೆ ಉಚಿತ ಸೇವೆ ಮುಂದುವರಿಕೆ: ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಯುಪಿಐ ವಹಿವಾಟುಗಳು ಮೊತ್ತ ಎಷ್ಟೇ ಇದ್ದರೂ ಸಂಪೂರ್ಣ ಉಚಿತವಾಗಿಯೇ ಮುಂದುವರಿಯಲಿವೆ. ದೈನಂದಿನ ಸಣ್ಣ ಮೊತ್ತದ ಪಾವತಿಗಳನ್ನು ಈ ಶುಲ್ಕದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.
ಹೊಸ ಎಂಆರ್‌ಡಿ ಶುಲ್ಕದ ವಿವರಗಳು:
ಅಕ್ಟೋಬರ್ 15 ರಿಂದ ರೂ. 2,000ಕ್ಕಿಂತ ಹೆಚ್ಚಿನ ಅರ್ಹ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ಯುಪಿಐ ಪಾವತಿಗಳ ಮೇಲೆ ಶೇ. 0.4ರಷ್ಟು ಎಂಆರ್‌ಡಿ ವಿಧಿಸಲಾಗುತ್ತದೆ (ರೂ. 75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಇದು ಗರಿಷ್ಠ ರೂ. 300ಕ್ಕೆ ಸೀಮಿತ).
ರೈಲ್ವೆ, ದೂರಸಂಪರ್ಕ, ವಿಮೆ, ಇಂಧನ ಮತ್ತು ಕೃಷಿ ಒಳಸುರಿಗಳಂತಹ ಅಗತ್ಯ ಹಾಗೂ ಕಡಿಮೆ ಲಾಭಾಂಶದ ವಲಯಗಳಲ್ಲಿ ರೂ. 2,000ಕ್ಕಿಂತ ಹೆಚ್ಚಿನ ಪ್ರತಿ ವಹಿವಾಟಿಗೆ ರೂ. 5 ರಷ್ಟು ನಿಗದಿತ ಎಂಆರ್‌ಡಿ ಅನ್ವಯಿಸುತ್ತದೆ.
ಮ್ಯೂಚುವಲ್ ಫಂಡ್‌ಗಳು, ಷೇರುಪತ್ರಗಳ ಹೂಡಿಕೆ ಹಾಗೂ ಷೇರು ದಲ್ಲಾಳಿಗಳು ಮತ್ತು ಡೀಲರ್‌ಗಳ ಮೂಲಕ ನಡೆಯುವ ವಹಿವಾಟುಗಳಿಗೆ ಶೇ. 0.02ರಷ್ಟು ಎಂಆರ್‌ಡಿ (ಗರಿಷ್ಠ ರೂ. 300 ಮಿತಿ) ವಿಧಿಸಲಾಗುತ್ತದೆ.
ಪ್ರತಿವಾದಿಗಳು ನಾಲ್ಕು ವಾರಗಳೊಳಗೆ ಉತ್ತರಿಸುವಂತೆ ಪೀಠವು ಸೂಚಿಸಿದ್ದು, ಮುಂದಿನ ವಿಚಾರಣೆವರೆಗೆ ಹೊಸ ನಿಯಮದ ಆಚರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಲಾಗಿದೆ.




