ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವ ಸಾವಿರಾರು ಭಕ್ತರ ಭಕ್ತಿ-ಸಂಭ್ರಮಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ಒಂದೆಡೆ ಬದುಕಿಗೆ ಕೃಷಿ ನಂಬಿರುವ ರೈತರು ಕುಟುಂಬ ಸಮೇತ ಬಂದು ಒಳ್ಳೆಯ ಮಳೆ-ಬೆಳೆಗೆ ಪ್ರಾರ್ಥಿಸುತ್ತಿದ್ದರೆ, ಮತ್ತೊಂದೆಡೆ ನವ ವಿವಾಹಿತೆಯರು ತವರಿನಿಂದ ಹಸಿರು ಬಳೆ-ಮಡಿಲಕ್ಕಿ ಉಡುಗೊರೆ ಸ್ವೀಕರಿ ಸಿದರು.
ಈ ನಡುವೆ ಎಳೆಯ ಮಕ್ಕಳು ಬೆಂಡು-ಬತ್ತಾಸು ಚಪ್ಪರಿಸುತ್ತ ಜಗತ್ತನ್ನೇ ಮರೆತವರಂತೆ ಜಾತ್ರೆ ನಡೆಯುತ್ತಿದ್ದ ಜಾಗದಲ್ಲಿ ಓಡಾಡುತ್ತಿದ್ದರು.
ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ನೂರಾರು ವರ್ಷದ ಇತಿಹಾಸ ಹೊಂದಿರುವ ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯದ ರಕ್ಷಕಿ ಎಂಬ ನಂಬಿಕೆ ಇದೆ.
ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿ ವಿಲಾಸ ಅಣೆಕಟ್ಟೆ ನಿರ್ಮಿಸಲಾಗಿದೆ. ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತಿದೆ.
ಸ್ಥಳೀಯರಲ್ಲದೆ, ತಮಿಳು ನಾಡು, ಆಂಧ್ರಪದೇಶದಿಂದ ರೈತರು ಈ ಜಾತ್ರೆಗೆ ಬಂದು ಹರಕೆ ಸಲ್ಲಿಸುವುದು ಪ್ರತಿವರ್ಷ ನಡೆದುಕೊಂಡು ಬಂದ ವಾಡಿಕೆ. ಶುಕ್ರವಾರ ಬೆಳಿಗ್ಗೆ ದೇವಿಗೆ ತಂಬಿಟ್ಟಿನ ಆರತಿ, ಬೇವಿನ ಸೇವೆ ಸಲ್ಲಿಸಲಾಯಿತು.
ಸಂಜೆ ನಾಲ್ಕು ಗಂಟೆಗೆ ದೇವಿಯ ರಥೋತ್ಸವ ಸಾವಿರಾರು ಭಕ್ತರ ಭಕ್ತಿ-ಸಂಭ್ರಮದ ನಡುವೆ ನೆರವೇರಿತು.


