ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್‌ನಲ್ಲಿ ಯಾರು ಸಿಎಂ ಸ್ಥಾನ ಬಿಟ್ಟು ಕೊಡ್ತಾರೆ? ಡಿಕೆಶಿ ಏನಿದ್ರು ಸಿಎಂ ಆಗುವ ಕನಸು ಕಾಣಬೇಕು ಅಷ್ಟೇ. ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಟೋ ಸ್ಟಾಂಡ್ ನಿರ್ಮಾಣದ ಗುದ್ದಲಿ ಪೂಜೆಯನ್ನು ಅವರು ಭಾನುವಾರ ನೆರವೇರಿಸಿ ಮಾತನಾಡಿದರು. 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿಕೆಶಿ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕೈಯಲ್ಲಿ ಏನೂ ಇಲ್ಲ, ಎಲ್ಲಾ ಭಗವಂತನ ಕೈಯಲ್ಲಿ ಇರೋದು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಹಲವು ವರ್ಷಗಳಿಂದ ಆಟೋ ಸ್ಟಾಂಡ್‌ಗೆ ಬೇಡಿಕೆ ಇತ್ತು. ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. CSR ಅನುದಾನದಲ್ಲಿ ಗುದ್ದಲಿ ಪೂಜೆ ಕಾಮಗಾರಿಗೆ ಚಾಲನೆ ನೀಡಿದರು.
ಬಸ್ ನಿಲ್ದಾಣದ ಮುಂಭಾಗ ಆಟೋ ಸ್ಟ್ಯಾಂಡ್ಗೆ ಚಾಲನೆ ನೀಡಿದ್ದೇನೆ. ಚಾಲಕರಿಗೆ ನೀವೇ ಗುದ್ದಲಿ ಪೂಜೆ ಮಾಡಿ ಎಂದಿದ್ದೆ. ದೊಡ್ಡ ಯೋಜನೆಗೆ ಚಾಲನೆ ಕೊಟ್ಟಾಗಲೂ ನಾನು ಪ್ರಚಾರಕ್ಕೆ ಎಂದು ಕೈ ಹಾಕಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪ್ರತಿ ಪಂಚಾಯತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ ಮಾಡಬೇಕು ಎಂಬುದು ಕನಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
8 ಕೋಟಿ ಯೋಜನೆಯಲ್ಲಿ ಮೊದಲ ಹಂತವಾಗಿ ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. 100 ಬಸ್ ಸೆಲ್ಟರ್ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದೇವೆ. ಜಿಲ್ಲೆಯ ವಿಕಲಚೇತನರಿಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿದ್ದೇನೆ. ಕಾರ್ಖಾನೆ ತರಬೇಕು ಎಂಬುದು ಮಂಡ್ಯ ಜಿಲ್ಲೆಯ ಜನರ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರದ ಸಹಕಾರ ಕೊಟ್ಟು ಪ್ರೋತ್ಸಾಹ ಮಾಡಿದರೆ ಅದನ್ನ ಮಾಡಬಹುದು. ಆದ್ರೂ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಟೀಕೆಗಳಿಗಿಂತ ಹೆಚ್ಚಾಗಿ ನನ್ನ ಡ್ಯೂಟಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ರಾಜ್ಯ ಸರ್ಕಾರದ ಸಹಕಾರದ ಬಗ್ಗೆ ಈಗ ಚರ್ಚೆ ಮಾಡಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು? ಎಂಬ ಕೈ ನಾಯಕರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಿಲ್ಲೆಗೆ ಕಾಂಗ್ರೆಸ್ನವರ ಕೊಡುಗೆ ಏನು?. ಕೃಷಿ ವಿವಿಯನ್ನ ಎಷ್ಟು ವರ್ಷ ಇಟ್ಟುಕೊಳ್ಳುತ್ತಾರೆ?. ಎಷ್ಟು ವರ್ಷ ನಡೆಸುತ್ತಾರೆ. ಬೀದರ್ ನಲ್ಲಿ ಪಶು ವೈದ್ಯಕೀಯ ವಿವಿಯನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಹಣ ಎಷ್ಟು ಕೊಟ್ಟಿದ್ದಾರೆ. ಎಷ್ಟು ವಿವಿಯನ್ನ ಇವರು ಮುಚ್ಚಿದ್ದಾರೆ. ಬರೀ ಪ್ರಚಾರಕ್ಕೆ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ಗೆ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಆಳಂದ ಶಾಸಕ ಬಿ. ಆರ್. ಪಾಟೀಲ್ ಅವರು ಹಣ ಕೊಟ್ಟವರಿಗೆ ಮನೆ ಎಂಬ ಆಡಿಯೋ ವಿಚಾರದ ಕುರಿತು ಮಾತನಾಡಿದ ಕುಮಾರಸ್ವಾಮಿ, ಶಾಸಕರು ಆ ರೀತಿ ಮಾತಾಡಿರೋದ್ರಲ್ಲಿ ಯಾವ ಆಶ್ಚರ್ಯ ಇಲ್ಲ. ಇದು ಎಲ್ಲರಿಗೂ ಗೊತ್ತಿರೋ ವಿಷಯ. ಸರ್ಕಾರದ ಹಲವು ಇಲಾಖೆಯಲ್ಲಿ ದುಡ್ಡು ರಿಲೀಸ್ ಆಗಲು ಶಾಸಕರು ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್ ಕೊಡಿ ಸರ್ ದುಡ್ಡು ತಗೊಂಡು ಬರ್ತೀವಿ ಅಂತಾರೆ. ಹೆಸರಿಗೆ ಶಾಸಕರ ಲೆಟರ್, ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ನನ್ನ ಬಳಿಯೂ ಮನೆ ತರಲು ಅಷ್ಟುಕೊಟ್ಟೆವು ಎಂದು ಚರ್ಚೆ ಮಾಡಿದ್ದಾರೆ. ಎಲ್ಲಾ ಇಲಾಖೆಯಲ್ಲೂ ಇದು ನಡೆಯುತ್ತಿದೆ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆ ಬರುವವರೆಗೆ ಕಾಯಬೇಕು. ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಎಷ್ಟು ಕೊಡಬೇಕು ಅಂತಾ ಆಯಾ ಇಲಾಖೆಗಳಲ್ಲಿ ಅವರೇ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ರೋಡ್ ಟನಲ್ ನಿರ್ಮಾಣ ವಿಚಾರವಾಗಿ ಮಾತನಾಡಿ, ರೋಡ್ ಟನಲ್‌ನ್ನು ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಮಾಡಲಿ. ನೋಡೋಣ ಯಾವ ಟನಲ್ ಮಾಡ್ತಾರೆ ಅಂತ. ಅವರ ಮಾತುಗಳು ಯಾವುವು ಆಗಲ್ಲ. ಈಗ 2027ಕ್ಕೆ ಎತ್ತಿನ ಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನು ಕಾಡುಮನೆ ಎಸ್ಟೇಟ್‌ನಿಂದ ಮುಂದೆ ಎತ್ತಿನ ಹೊಳೆ ಬಂದಿಲ್ಲ. ಈಗಾಗಲೇ 14, 15 ಸಾವಿರ ಕೋಟಿ ಲೂಟಿ ಆಗಿದೆ. 2013ರಲ್ಲಿ ಇದೇ ಸರ್ಕಾರ ಗುದ್ದಲಿ ಪೂಜೆ ಮಾಡಿತ್ತು. ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಕೊಡ್ತೀವಿ ಅಂದ್ರು ಆಗ. 2013 ರಿಂದ 2025ಕ್ಕೆ ಬಂದ್ರು ಇನ್ನೂ ನೀರಿಲ್ಲ. ಎತ್ತಿನಹೊಳೆ ನೀರು ಕೊಡ್ತೀವಿ ಅಂತ ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅವರು ಬೆಳೆಯೋ ತರಕಾರಿನೂ ಯಾರೂ ಕೊಳ್ಳಬಾರದು ಹಾಗೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.
ಮೈಶುಗರ್ ಸ್ಕೂಲ್‌ನ್ನು ಮಾಡೆಲ್ ಶಾಲೆ ಮಾಡಲು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡೋದು ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ ಕೇಂದ್ರ ಸಚಿವರು, ಇದು ಹಗಲು ದರೋಡೆ ಆಗಿದೆ. ಮೈಶುಗರ್ ಶಾಲೆ ಅಭಿವೃದ್ಧಿಗೆ 25 ಕೋಟಿ ಬೇಕು ಅಂದ್ರು ಮಾಡಲು ತಯಾರಿದ್ದೇನೆ. ಮಂಡ್ಯ ಜಿಲ್ಲೆಗೆ ನಾನೇನು ಮಾಡಿಲ್ಲ ಅಂತಾರೆ. ಇವರೇನೋ ಕಿತ್ತು ಗುಡ್ಡೆ ಹಾಕಿದಾರಂತಲ್ಲ. ಕಾಂಗ್ರೆಸ್ ನಾಯಕರು ಇದೇ ಕಿತ್ತು ಗುಡ್ಡೆ ಹಾಕುತ್ತಿರೋದು ಎಂದು ಕಿಡಿಕಾರಿದ್ದಾರೆ.
ಈ ವೇಳೆ ಪಕ್ಷದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ಮತ್ತಿತರರು ಉಪಸ್ಥಿತರಿದ್ದರು.


