ಚಂದ್ರವಳ್ಳಿ ನ್ಯೂಸ್, ತುಮಕೂರು:
ವಿಧಾನಸಭಾ ಚುನಾವಣೆಯ ಸೋಲು ಹಾಗೂ ಲೋಕಸಭೆ ಚುನಾವಣೆಯ ನಂತರ ರಾಜಕೀಯವಾಗಿ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಇದೀಗ ದಿಢೀರ್ ಮುನ್ನೆಲೆಗೆ ಬಂದಿದ್ದಾರೆ. ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಅವರು, ಇಂದು ಏಕಾಏಕಿ ಪ್ರತ್ಯಕ್ಷರಾಗಿ ಸ್ವಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸೋತಿದ್ದರೂ ಕಾರ್ಯಕರ್ತರ ಜೊತೆಗಿದ್ದೇನೆ:
ಬಿಜೆಪಿ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಜನ ನನ್ನನ್ನು ಸಾರ್ವಜನಿಕವಾಗಿ ಇರಲು ಇಷ್ಟಪಡಲಿಲ್ಲ, ಅದಕ್ಕೆ ಸೋಲಿಸಿದ್ದಾರೆ. ಹಾಗಾಗಿ ನಾನು ಸ್ವಲ್ಪ ದೂರ ಉಳಿದಿದ್ದೇನೆ. ಆದರೆ ಕಾರ್ಯಕರ್ತರನ್ನು ನಾನು ಬಿಟ್ಟಿಲ್ಲ. ಈ ಜಿಲ್ಲೆಯಲ್ಲಿ ಚುನಾವಣೆ ಸೋತ ನಂತರವೂ ಸಂಘ-ಸಂಸ್ಥೆಗಳ ಮತ್ತು ಕಾರ್ಯಕರ್ತರ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಏಕೈಕ ಪರಾಜಿತ ಅಭ್ಯರ್ಥಿ ನಾನು. ಚುನಾವಣೆ ಸೋತಿರಬಹುದು, ಆದರೆ ಕಾರ್ಯಕರ್ತರ ಜೊತೆಗಿನ ಸಂಬಂಧ ಚೆನ್ನಾಗಿದೆ," ಎಂದು ಸ್ಪಷ್ಟಪಡಿಸಿದರು.
ಬಿಎಸ್‌ವೈ ಕಾರ್ಯಕ್ರಮಕ್ಕೆ ಗೈರು: ನೇರ ಪ್ರತಿಕ್ರಿಯೆ:
ಇತ್ತೀಚೆಗೆ ನಡೆದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ 'ಅಭಿಮಾನೋತ್ಸವ' ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಕೇಳಿದಾಗ ಮಾಧುಸ್ವಾಮಿ ತಮ್ಮ ಆಕ್ರೋಶ ಹೊರಹಾಕಿದರು. "ಕರೆಯದೇ ಇರುವ ಕಾರ್ಯಕ್ರಮಗಳಿಗೆ ನಾನು ಹೇಗೆ ಬರಲಿ?" ಎಂದು ಪ್ರಶ್ನಿಸುವ ಮೂಲಕ ಪಕ್ಷದ ನಾಯಕರು ತಮ್ಮನ್ನು ಕಡೆಗಣಿಸುತ್ತಿರುವುದನ್ನು ಪರೋಕ್ಷವಾಗಿ ಬಿಚ್ಚಿಟ್ಟರು.
ಪಕ್ಷದಲ್ಲಿ ಮುಂದುವರಿದ ಅಂತರ?:
2023ರ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸೋಲಿನ ಬಳಿಕ ಮಾಧುಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರ ನಡೆಗಳಿಂದ ಅತೃಪ್ತರಾಗಿದ್ದಾರೆ ಎನ್ನಲಾಗುತ್ತಿತ್ತು. ಇಂದು ಅವರು ನೀಡಿರುವ ಹೇಳಿಕೆಗಳು ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಪುಷ್ಟೀಕರಿಸಿವೆ. ವಿಶೇಷವಾಗಿ ತುಮಕೂರು ಜಿಲ್ಲಾ ರಾಜಕಾರಣದಲ್ಲಿ ಮಾಧುಸ್ವಾಮಿ ಅವರ ಈ 'ದಿಢೀರ್ ಎಂಟ್ರಿ' ಮತ್ತು 'ಬಹಿರಂಗ ಅಸಮಾಧಾನ' ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


