ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾರಿಗೂ ನೆಮ್ಮದಿಯಿಲ್ಲ” KPSC ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು,
ಮಧ್ಯರಾತ್ರಿ ಅರ್ಜಿ ತುಂಬಿ ಪ್ರವೇಶಾತಿ (ಹಾಲ್ ಟಿಕೆಟ್) ಪಡೆಯುವಂತೆ ಗೊಂದಲ ಸೃಷ್ಟಿಸಿರುವ KPSC ಕಾರ್ಯವೈಖರಿ ಪರೀಕ್ಷಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವ ದುರುದ್ದೇಶ ಪ್ರತಿಬಿಂಬಿಸಿದೆ. ಉದ್ಯೋಗಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜೊತೆ KPSC ಚೆಲ್ಲಾಟವಾಡುತ್ತಿದ್ದರೆ ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ನೋಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ KPSC ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಹೋಗಿ ಮರುದಿನ ಬೆಳಗ್ಗೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವಂತೆ ಮಾಡಿರುವ ಗೊಂದಲದ ವ್ಯವಸ್ಥೆಯಿಂದ ಹಿಂಸೆ ಅನುಭವಿಸುತ್ತಿರುವ ಪರೀಕ್ಷಾರ್ಥಿಗಳು ಹಾಗೂ ಅವರ ಕುಟುಂಬದವರ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟದೇ ಬಿಡದು.
ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಮಾತು ಕೊಟ್ಟು, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಿಜೆಪಿ ನೊಂದವರ ದನಿಯಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ.