ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಪ್ರೀಂಕೋರ್ಟ್‌ನ ಏಳು ನ್ಯಾಯಾಧೀಶರ ಪೀಠದ ತೀರ್ಪಿನನ್ವಯ ಪರಿಶಿಷ್ಟ ಜಾತಿಯಲ್ಲಿನ ಒಳಪಂಗಡಗಳಿಗೆ ಒಳ ಮೀಸಲಾತಿ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿದರು.
ಒಳ ಮೀಸಲಾತಿ ಜಾರಿಗಾಗಿ ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ದಿಗಾಗಿ ಬಳಸಬೇಕಾಗಿರುವ ಎಸ್ಸಿ.ಪಿ. ಟಿ.ಎಸ್.ಪಿ. ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನು ವಾಪಸ್ ನೀಡಬೇಕೆಂದು ಪ್ರತಿಭಟನಾನಿರತರು ಧಿಕ್ಕಾರಗಳನ್ನು ಕೂಗಿದರು.
ಎಸ್ಸಿ. ಎಸ್ಟಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಕಾಲಕ್ಕೆ ನೀಡುತ್ತಿಲ್ಲ. ಮೆರಿಟ್ ವಿದ್ಯಾರ್ಥಿ ವೇತನ ಹಾಗೂ ವಿದೇಶ ವ್ಯಾಸಂಗಕ್ಕೆ ನೀಡುತ್ತಿದ್ದ ನೆರವನ್ನು ರದ್ದುಪಡಿಸಿ ರಾಜ್ಯ ಸರ್ಕಾರ ದಲಿತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಪರಿಶಿಷ್ಟರ ಮೀಸಲಾತಿ ವರ್ಗಿಕರಣಗೊಳ್ಳುವತನಕ ಸರ್ಕಾರ ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕು. ಖಾಸಗಿ ಹಾಗೂ ಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಎಸ್ಸಿಪಿ. ಟಿ.ಎಸ್ಪಿ. ಕಾಯಿದೆ ರಚಿಸಿ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಕೇಂದ್ರ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಸ್.ಎನ್.ವಿಶ್ವನಾರಾಯಣಮೂರ್ತಿ, ವಿಭಾಗೀಯ ಕಾರ್ಯಾಧ್ಯಕ್ಷ ನೇಹ ಮಲ್ಲೇಶ್, ಕೆ.ನಾಗಭೂಷಣ್, ಯುವ ಘಟಕ ಜಿಲ್ಲಾಧ್ಯಕ್ಷ ಪ್ರದೀಪ್, ಕಾನೂನು ಸಲಹೆಗಾರ ಜಿ.ಆರ್.ಪ್ರಭಾಕರ್, ಲೇಖಕ ಹೆಚ್.ಆನಂದಕುಮಾರ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ಚನ್ನಬಸವ ಡಿ.ಕಣುಮೇಶ್, ಶ್ರೀಹರಿ, ಇಮ್ರಾನ್‌ಬೇಗ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿದ್ದರು.