Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಡಪನ ಕಟ್ಟೆ  ಕಥೆ ಭಾಗ-9: ಕುಮಾರ್ ಬಡಪ್ಪ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಸಿಲ ದಿನಗಳು ಕಳೆದು
, ಆಗಸಕ್ಕೆ ಕಪ್ಪಿಟ್ಟ ಮುಂಗಾರಿನ ಮೋಡಗಳು ಗಟ್ಟಿಯಾಗತೊಡಗಿದ್ವು. ಈ ಭಾಗದ ಬಹುತೇಕ ಹಟ್ಟಿ,ಹಳ್ಳಿಗಳು ಮಲ್ಲನಾಯಕನಟ್ಟಿ ತಿಪ್ಪಯ್ಯನ ತೇರಿನ ದಿನದಂದೇ ಶುಭ ಸಂಕೇತವಾಗಿ ಮುಂಗಾರು ಬಿತ್ತನೆಗೆ ಮೊದ್ಲು ಮಾಡೋ ಪದ್ಧತಿ,ಹಿಂದಿನಿಂದ್ಲೂ ಮಾಡ್ಕಂಡು ಬಂದಿರೋ ಸಂಪ್ರದಾಯಗಳು, ಆ ಪೂಜೆಗಳೂ ಸಹ ಆರಂಭವಾಗಿದ್ವು.

ಕಟ್ಟೇ ವಿಚಾರವಾಗಿ ಚೇಷ್ಟೇಯಿಂದ ಹೀಗೆಳೆದಿದ್ದ ಭೀಮಣ್ಣ ಕಂಚಪ್ಪ ಹಾಗೂ ಹಟ್ಟಿಯವ್ರೆಲ್ಲಾ ತಪ್ಪಿನ ಅರಿವಾಗಿ ನಮ್ಮ ಸಣ್ತನಕ್ಕೆ ಮನ್ನಿಸ್ರಿ ಅಂತ ಗಂಡ ಹೆಂಡ್ರನ್ನ ಬೇಡಿಕೊಂಡಿದ್ರು.

ಗೌರವ್ವನ ಹೋಟ್ಲನಲ್ಲಂತೂ ಮೆಣಸಿನಕಾಯಿ ಮಂಡಕ್ಕಿ ಚಹಾ ಜೊತೆ, ಇವರಿಬ್ರ ವಿಷ್ಯಾನೇ ಬಿಸಿ ಸುದ್ದೀ, ಹೂವಿನ ಜೊತೆ ನಾರುನೂ ಸೇರಿ ಸ್ವರ್ಗಕ್ಕೆ ಹೋದಂತೆ ಮಂದಿ ಬಾಯಲ್ಲಿ, ಅಡ್ಡ ಕಟ್ಟೆ ನಿರ್ಮಾಣವಾಗೋದ್ರೊಳಗೇ ಬಡಪ್ಪನ ಜೊತೆ ಸೂರವ್ವನೂ ಮನೆ ಮಾತಾಗಿದ್ಲು, ಬಹುತೇಕ ರೈತ್ರೂ ಕಟ್ಟೆಗೆ ನೀರು ನಿಂತ್ರೇ ನಮಗೊಂದಿಷ್ಟು ಬೆಳೆಯಾದೀತು ಅಂತ ತಿಪ್ಪಯ್ಯನ ತೇರಿನ ದಿನದಿಂದ ಮಾಗಿಗೂ ಮುಂದಾಗಿದ್ರು.

ಅಂದೊಂದು ದಿನ ಮಧ್ಯಾಹ್ನವೇ ದಟ್ಟ ಮೋಡಗಳು ಕವಿದು ಮುಸ್ಸಂಜೆಯಾಗಿಸಿ,ಮಿಂಚು ಗುಡುಗುಗಳೊಂದಿಗೆ ದಿನವಿಡೀ ಧೋ....ಎಂದು ಸುರಿದ ಮಳೆ, ನೆಲ ಮುಗಿಲಿಗೆ ಹಾಸಿ,ಹಳ್ಳ ಕೊಳ್ಳ ಹೊಲ ಕಟ್ಟೆಗಳನ್ನ ತೇಲಾಡಿಸಿತ್ತು. ಕಾರ್ಮೋಡಗಳು ಕಳಚಿ ಬಿದ್ದಿವೆಯೇನೋ ಅನ್ನುವಂತೇ

ಓಬಳ ದೇವ್ರ ಗುಡ್ಡಕ್ಕೆ ತಾಗಿಸಿಕೊಂಡು ಭೋರ್ಗರೆದ ಜಿನಿಗಿ ಹಳ್ಳ ಮೈದುಂಬಿ ಹರಿಯಲು ಶುರುವಾಗಿ ಅಡ್ಡಗಟ್ಟಿದ ಕಟ್ಟೆಗೇ ನೀರು ನಿಲ್ಲತೊಡಗಿ ಅವನ ಶ್ರಮದ ಯೋಜನೆಗಳೆಲ್ಲಾ ಫಲಿತೊಡಗಿದ್ದವು.

ಸುತ್ತಳ್ಳಿಯ ಜನ ಕಟ್ಟೆಯನ್ನು ನೋಡುವುದಕ್ಕಾಗಿಯೇ ಬಂದು ಮೆಚ್ಚಿ ಕೊಂಡಾಡುವುದು ಪರಿಪಾಠವಾಗಿತ್ತು. ಪತ್ರಿಕೆಗಳಲ್ಲೂ ಶ್ರಮದ ಸುದ್ದಿಯಾಗಿ

ರೈತ ಸಂಘಗಳು ನಿಬ್ಬೆರಗಾಗಿದ್ದವು!. ಅಷ್ಟಾಗಿ ಆ ಗುಡ್ಡಗಳ ಕಡಗೆ ಎಂದೂ ಹೋಗದ ಕುರಿ ದನ ಕರುಗಳು, ಚಿಗ್ರು ಮೇವು ಕುಡ್ಯೋ ನೀರಿಗಾಗಿ ಕಟ್ಟೆ ಕಡೆಗೂ ಅಡ್ಡಾಡತೊಡಗಿದ್ವು.

ಮೊದ್ಲೇ ಮಾಗಿಯಾಗಿದ್ದ ಕೆಲವು ಹೊಲಗಳಿಗೆ ಬೀಜ ಬಿದ್ದು ಮೊಳಕೆಯಾಗಿ ಹಸಿರೊದ್ದ ಪೈರುಗಳೂ ತಲೆ ಎತ್ತಿದ್ವು. ಬಡಪ್ಪನ ಹೊಲವೂ ಸೇರಿದಂತೆ ಹಟ್ಟಿಯ ರೈತ್ರ ಹೊಲಗಳು ಆಗಾಗ ಬಿದ್ದ ಮುಂಗಾರಿಗೂ ಕಟ್ಟೆಯಲ್ಲಿ ನಿಂತ ಹಿನ್ನೀರಿಗೂ ಸಮೃದ್ಧವಾಗಿ ಮೈದಳೆದು ತೆನೆ ದೂಗಿಸಿಕೊಂಡಿದ್ದವು.

ಆ ದಿನ ರಾತ್ರಿ ಕೃಷ್ಣೇಗೌಡ ಊಟ ಮುಗಿಸಿ ಜಗಲಿ ಕುರ್ಚಿಗೆ ಒರಗಿದ್ದ. ಪಕ್ಕದಲ್ಲಿಯೇ ಗೌಡ್ತಿ ರತ್ನವ್ವ ವೀಳ್ಯವನ್ನು ಮಡ್ಚಿ ಕೊಡ್ತಾ ತಾನು ಸಹ ತಾಂಬೂಲನ ಸವಿತಾ ಕೂತಿದ್ಲು. ಮೂಟೆ ತುಂಬಿದ ಚಕ್ಕಡಿ ಗಾಡಿಯೊಂದು ಗೌಡ್ರ ಮನೆಯ ವರಾಂಡ ಬಳಸಿ ಒಳಬಂದು ನಿಂತಿತು!.

ಈ ಹೊತ್ನಾಗೇ ಯಾರದೂ? ದೂರದಿಂದ್ಲೇ ಗಮನಿಸಿದ್ದ ರತ್ನವ್ವ ಅಯ್ಯೋ ಅವ್ರೇ ಮಾರಾಯ! ಮುದ್ದಿಗಿಲ್ದವೂ ಈಗ ಬೆಳ್ಕಂಡು ಗಾಡಿಗೆ ತುಂಬ್ಕಂಡು ಬಂದವ್ರೇ ಅದೇ ಸೂರವ್ವ ಬಡಪ್ಪ!ಅಂದ್ಲು.

ಗೌಡನೂ ಮಾತ್ನಾಡ್ದೆ ನೋಡ್ತಲೇ ಇದ್ದ. ಗಂಡ ಹೆಂಡ್ರಿಬ್ರೂ ಇವ್ರು ಕುಂತ ಕಡ್ಗೇ ಹತ್ರವಾಗ್ತಾ ಬಗ್ಗಿ ನಮಸ್ಕರಿಸಿ ಬಡಪ್ಪನೇ ಮಾತಾಡ್ದ. ಬುದ್ದಿಯೋರ ಕಟ್ಟೆ ಹಿನ್ನೀರಿಗೆ ಬೆಳೆದ ಬೆಳೆ ಇವು, ಸಾಲಕ್ಕೆ ಬರ್ಕಂಡು ನಮ್ ಹೊಲ ಮನಿ ಪತ್ರ ನಮ್ಗೆ ಕೊಡ್ರಿ, ನಮ್ಮ ಭೀಮಣ್ಣ ಕಂಚಪ್ಪನೂ ಸೇರಿ ಇನ್ನೂ ನಮ್ಮಟ್ಟಿ ರೈತ್ರು ಆ ನೀರಿನಾಗೆ ಫಸ್ಲು ತೆಗ್ದಾರೆ, ನಮ್ಮ ದನಕರು,ಕುರಿ ಮರಿಗಳಿಗೆ ಮೇವು ನೀರಾತು ಬುದ್ಧಿ.

ಈಗ್ಲಾದ್ರೂ ದೊಡ್ಡ ಮನ್ಸು ಮಾಡ್ರಿ, ಕಟ್ಟೇನ ಇನ್ನೂ ವಸಿ ಎತ್ರ ದಪ್ಪ ಮಾಡಿಸಿದ್ರೇ, ಕಾಯಂ ಆಗಿ ಯಳಗೋಡು ಮುದ್ದಾಪುರ ಮ್ಯಾಸ್ರಟ್ಟಿಗೊಂದು ಆಸ್ರೇ ಆದೀತು, ಮಂದಿ ಗುಳೇವು ಹೋಗೋದು ನಿಲ್ಸಿ ಇಲ್ಲೇ ಕೂಲಿ ನಾಲಿ ಮಾಡಿ ಬದ್ಕಾಕೆ ಒಂದು ದಾರಿನೂ ಆದೀತಲ್ವಾ...

ಗೌಡ್ತಿ ರತ್ನವ್ವೆಯ ಬೆರಳು ಮಾತ್ನಾಡ್ದಂತೆ ತಾಂಬೂಲದ ಬಾಯನ್ನ ಅದ್ಮಿಟ್ಟಿತ್ತು! ಸೂರವ್ವೆಯಂತೂ ಗೆದ್ದು ಬಂದಿದ್ದೇವೆ ಅನ್ನೋ ಬಿಗುಮಾನದಿಂದ ಮಂದಸ್ಮಿತೆಯಲ್ಲಿ ಗೌಡನ ಮುಖವನ್ನೇ ದಿಟ್ಟಿಸಿದ್ದಳು ಬಡಪ್ಪನ ಮಾತುಗಳು ಹಾಗೆಯೇ ಮುಂದುವರೆದಿದ್ವು, ಗೌಡ್ರ ಅಣತಿಯಂತೆ ಅಂದು ಹೊರದೂಡಲು ಮುಂದಾಗಿದ್ದ ಜೀತುದಾಳು ತಿಮ್ಮ ಚಕ್ಕಡಿಗಾಡಿಯೊಂದಿಗೆ ನಿಂತಿದ್ದ ಗಂಡ ಹೆಂಡ್ರನ್ನ ನೋಡಿ, ಒಮ್ಮೆ ಕೃಷ್ಣೆಗೌಡನನ್ನೂ ದಿಟ್ಟಿಸುತ್ತಲೇ ಪಕ್ಕದಿಂದ ಹಾದು ಬಿರುಸಾಗಿ ಹೊರಹೋದ.  

ಗೌಡನಂತೂ ಏನೂ ಹೇಳದೇ ಚಕ್ಕಡಿ ಗಾಡಿಯಲ್ಲಿ ತಂದಿದ್ದ ದವಸದ ಮೂಟೆಗಳನ್ನೊಮ್ಮೆ ಸೂರವ್ವ ಬಡಪ್ಪನನ್ನೊಮ್ಮೆ ನೋಡಿ ರತ್ನವ್ವೆಯ ಕಡೆ ತಿರುಗಿ ತಲೆ ತಗ್ಗಿಸುತ್ತಾ ನೆಲ ದಿಟ್ಟಿಸಿದ್ದ.
ಲೇಖನ: ಕುಮಾರ್ ಬಡಪ್ಪ, ಚಿತ್ರದುರ್ಗ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST