ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವರಾಂಡ ಮೌನವಾಗಿತ್ತು ಗೌಡ ಬೈದು ಹೋಗಿದ್ದು, ಸಂಬಳದಾಳು ತಿಮ್ಮ ತಳ್ಳಾಡಿದ್ದು, ಸೂರವ್ವೆಗೆ ಸಹಿಸ್ಲಾರದಷ್ಟು ನೋವಾಗಿ ದುಃಖ ಮನೆಮಾಡಿತ್ತು.
ಇರೋ ಇಬ್ರು ಬದ್ಕಾಕೆ ಯಾಕಿಂತ ದುರ್ಬುದ್ಧಿ ಬಂತು ನಿನಗೆ, ಕಂಡ ಕಂಡವ್ರ ಹತ್ರ ಬೈಸ್ಕೊಂಡು ಬಾಳೋ ಅಂತದ್ದು ನಮ್ಗೇನು ಬಂದೈತಿ. ನೀರಾಡುತ್ತಿದ್ದ ಕಣ್ಗಳನ್ನ ಒರೆಸಿಕೊಳ್ಳುತ್ತಲೇ ಸೂರವ್ವನ ಮಾತುಗಳು ಮುಂದುವರೆದಿದ್ದವು. ಬಡಪ್ಪ ಮಾತ್ರ ಗೆಲುವು ನನ್ನದೇ ಎನ್ನುವ ಹಠದಿಂದ್ಲೋ ಏನೋ ಮುಖದಲ್ಲಿ ತುಸು ನಗು ತಂದು ಮರೆಯಾಗ್ಸುತ್ತಾ,ಸೂರವ್ವೆಯ ಕೈ ಹಿಡಿದವನೇ, ಒಳ ಹೋಗಿದ್ದ ತಿಮ್ಮ ಬರೋದನ್ನೂ ಕಾಯದೇ ಹಾದಿಗಿಳಿದು ನಡೆಯತೊಡಗಿದ್ದ.
ಕತ್ತಲಾದರೂ ರಾತ್ರಿ ಮುದ್ದಿಗೆ ಒಲೆ ಇನ್ನೂ ಬೆಂಕಿನೇ ಕಂಡಿರಲಿಲ್ಲ, ಇಬ್ರೂ ಹಾಗೆ ಉಪವಾಸವೆಂದು ತೀರ್ಮಾನಿಸಿಕೊಂಡಂತೆ, ಸೂರವ್ವೆಗಾಗಿದ್ದ ಕೃಷ್ಣೇಗೌಡನ ಮನೆಯ ಅವಾಂತರಕ್ಕೆ, ಬಡಪ್ಪ ಮದ್ದು ಹಚ್ಚೋ ಪ್ರಯತ್ನನೂ ಮಾಡಿದ್ದ.
ಹಾಗಲ್ಲ ಕಣಮ್ಮಿ ನನ್ನ ಮಾತು ವಸಿ ಕೇಳು,ಯಾಕೋ ಏನೋ ಇಂತಾದ್ದೂ ನನ್ನ ಮನಸ್ನಾಗ ಬರಬಾರದಿತ್ತು, ಆ ದ್ಯಾವ್ರು ತಲೆಗೆ ತುಂಬಿಟ್ಟವ್ನೇ! ನಾನೇನ್ಮಾಡ್ಲೀ? ನನ್ನತ್ರ ದುಡ್ಡಿಲ್ಲ ಆದ್ರೆ ಈ ಹಟ್ಟಿ ಕಷ್ಟನಾ ತುಂಬಿಕೊಳ್ಳುವಂತ ಹೃದಯ ಕೊಟ್ಟಾನಲ್ಲ ಆ ನಮ್ಮಪ್ಪ ಕಂಚೋಬಳ ಅಷ್ಟೇ ಸಾಕು ನನಿಗೆ. ಇಂದಲ್ಲ ನಾಳೆ ಜಯ್ಸೇ ಜಯ್ಸತ್ತೀನಿ,ನನ್ನ ಜನಕ್ಕೆ ಕೈಲಾದ ಸಹಾಯ ಮಾಡ್ತೀವ್ನಿ ಅನ್ನೋ ಭರವಸೆ ಐತಿ ನನ್ಗೆ.
ಯಾರೂ ನನ್ನ ಪರವಾಗಿ ಬರ್ದೇ ಹೋದ್ರೂ,ಇಡೀ ಮುದ್ದಾಪುರ ಮ್ಯಾಸರಟ್ಟಿನೇ ನಕ್ಕು ನನ್ನ ಹುಚ್ಚಾ ಅಂತ ಕಲ್ಲಲ್ಲಿ ಹೊಡದ್ರೂ ನೀನೊಬ್ಬಳು ನನ್ನ ಸಹಾಯಕ್ಕೆ ನಿಂತ್ಕಳ್ಳಮ್ಮಿ ಸಾಕು, ಸುತ್ತಮುತ್ಲೋರು ಕೊಡೋ ಹಿಂಸೇನ ನೀನು ಕೊಡಬ್ಯಾಡ.
ಸೆರಗಿಂದ ಕೆನ್ನೆಗೆ ಜಾರಿದ ಕಣ್ಣೀರನ್ನ ಒತ್ತಿಕೊಳ್ತಾ ಸೂರವ್ವ, ಇಷ್ಟೆಲ್ಲಾ ಯಾಕೆ ಮಾರಾಯ ಬಿಟ್ಟುಬಿಡು ಅದನ್ನ,ಇವತ್ತು ಆದುದ್ದು ಸಾಕಿಲ್ಲೇನು? ಗೌರವ್ವನ ಹೋಟ್ಲತ್ರಾನೂ ಅದೇ ಮಾತೇ. ಹಾದ್ಯಾಗ ಹೋಗ್ತಿದ್ದ ಆ ಸೂಲ್ಗಿತ್ತಿ ಮಣ್ಣಜ್ಜಿನೂ ಕರೆದು ಹೇಳ್ತವ್ಳೆ.
ಸೂರವ್ವ ನಿನ್ನ ಗಂಡಂಗೆ ಏನೋ ತಲೆ ಸರಿ ಇಲ್ವಂತೇ, ಬೆಂಗ್ಳೂರು ಪಟ್ಣುಕ್ಕೋಗಿ ತೋರಿಸ್ಕೊಂಡು ಬರಬಾರ್ದ ಅಂದ್ಲು. ಸೂರವ್ವನ ಮಾತಿಗೆ ನಗುತ್ತಲೇ ಬಡಪ್ಪ ಅವ್ಳ ತಲೇನ ನೇವರಿಸುತ್ತಾ. ನಾನು ಹುಚ್ಚಾ ಅಂತ ನಿನ್ನ ಮನ್ಸಿಗೆ ಎಂದು ಬರುತ್ತೋ ಅಂದು ಯೋಚ್ನೇ ಮಾಡ್ವಂತೆ ಅದು ಈಗ್ಯಾಕೆ.
ಕಟ್ಟೆ ಕಟ್ಟಾಕೇ ನಿರ್ಧಾರ ಮಾಡಿವ್ನಿ! ಗೆಲ್ತಿನೋ,ಸೋಲ್ತಿನೋ ಸಾಯ್ತಿನೋ ದ್ಯಾವ್ರಿಗ್ಗೊತ್ತು, ನೀನು ನನ್ನ ಜತೆಯಾಗಿರು. ಹಳ್ಳಕ್ಕೆ ನೀರು ನಿಲ್ಸಿ ಆ ನೀರಿನಿಂದ ನನ್ನ ಹೊಲ್ದಾಗ ಬೆಳಿ ತೆಗ್ದು,ಈ ಹಟ್ಟಿ ಮುಂದೆ ಸುರಿತೀನಿ,ಇಲ್ಲಾ ಈ ಪ್ರಯತ್ನ ಮಾಡ್ತಾ ಮಾಡ್ತಾ ಇಲ್ಲೇ ಈ ಹಳ್ಳದಾಗೆ ಸತ್ನಪ್ಪ ಅಂತ ಅನ್ಸಕೊಳ್ತೀನಿ. ಸೂರವ್ವನಿಗೆ ದಿಕ್ಕು ತೋಚದೇ ಮುಗಿಲೇ ಕಳಚಿ ಬಿದ್ದಂತಾಗಿತ್ತು.
ನನಗಾರಾ ಯಾರಿದ್ದಾರೆ? ಎದಿಗೆ ಬಂದಿದ್ದ ಮಗ್ಳು ನಾಗವ್ವ ಎಷ್ಟೊಂದು ಅಂದವಾಗಿ ಓಡಾಡ್ಕೊಂಡಿದ್ಲು,ಈಗ್ಗೇ ಮೂರು ವರ್ಷದ ಹಿಂದೆ ಗೌಡನ ಹೊಲ್ದಾಗ ಕೂಲಿಗೆ ಅಂತ ಹೋಗಿ ಹಾವು ಕಡಸ್ಕಂಡು ಸತ್ಲು, ಅವ್ಳ ಆಯಸ್ಸು ಅಷ್ಟೇ ಅಂತ ಕೃಷ್ಣೇಗೌಡ ಹಟ್ಟಿಯವ್ರಿಗೆ ಹೇಳಿ ಮಣ್ಣು ಮಾಡ್ಸಿದ್ದ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ.......


