ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಗಳ ಚಿಂತೇಲಿ ನಾಲ್ಕು ದಿನ ಸೊರಗಿದ್ದ ಗಂಡ ಹೆಂಡ್ರು, ಬಡಪ್ಪನೇ ಒಂದು ತೀರ್ಮಾನಕ್ಕೆ ಬಂದು, ಈ ಹಟ್ಟಿಯಾಗಿರೋ ಮಕ್ಳೂ ನಮ್ಗೇ ಮಗಳಿದ್ದಂಗಲ್ವೇನು ಅವನ್ನೇ ನೋಡ್ಕಂಡು ಬದಕಾನಮ್ಮಿ ಅಂತ ಸೂರವ್ವನ ಕಣ್ಣು ಒರಸ್ತಾ, ಹಾರೆ,ಪುಟ್ಟಿ,ಸಲಿಕೆ ಹೊತ್ತು ಕೂಲಿ ಬದ್ಕಿಗೆ ಹೊರ್ಟೋಗಿದ್ದ.
ಈಗ ನೋಡು ತೆಪ್ಪಗಿರಬಹುದಾಗಿತ್ತು? ಆದ್ರೇ ಕಟ್ಟೆ ಕಟ್ಟಾನ,ಸಾಧ್ಯವಾದಷ್ಟು ನಮ್ಮ ಹಟ್ಟಿ ಉಳ್ಸಾನ ಅಂತವ್ನೆ, ಕೇಳ್ದವರೆಲ್ಲಾ ನಕ್ಕು ಹುಚ್ಚ ಅಂತವ್ರೆ, ಆ ಕೃಷ್ಣೆಗೌಡ ಮನ್ನೆ ಯಾಪಾಟಿ ಬೈದಾ,ನಮ್ಗಿದೂ ಬೇಕಿತ್ತಾ? ಮೊದಮೊದ್ಲೂ ಉಂಬಾಕ್ಕಾದ್ರೂ ಹೊತ್ತೊತ್ತಿಗೆ ಬರ್ತಿದ್ದ, ಈಗೀಗ ಅದನ್ನೂ ಮರೆತುಬಿಟ್ಟವ್ನೆ, ಮುದ್ದೆ ಮಾಡಿಟ್ಟು ನಾನೇ ಹೋಗಿ ಕರ್ಕಂಬರ್ಬೇಕು.
ಜನಗಳೇ ಹೇಳ್ತವ್ರೇ! ಇತ್ತಿತ್ಲಾಗೆ ಮ್ಯಾಸರಟ್ಟೀ ಮುದ್ದಾಪುರದಲ್ಲೀ ಎಲ್ಲೂ ಕಾಣ್ಸಲ್ವಂತೇ? ಎಷ್ಟೊತ್ತಿಗೋದ್ರೂ ಅದೇ ಗುಡ್ಡಗಳತ್ರ ಒಬ್ಬನೇ! ಕೂಲಿಗೂ ಹೋಗ್ದಂಗೇ? ಈ ವಯಸ್ನಾಗೂ ನಾನೇ ತಂದಾಕಂಗಾಯ್ತು ಇವ್ನಿಗೇ.
ಮದ್ಯವಯಸ್ಸಿನ ಆಸುಪಾಸಿಗಿದ್ದ ಬಡಪ್ಪ, ಸೊಂಟಕ್ಕೊಂದು ಕಚ್ಚೆ ಪಂಚೆ,ತಲೆಗೆ ಕಟ್ಟಿದ ವಸ್ತ್ರವೊಂದು ಬಿಟ್ರೇ ಉಳಿದೆಲ್ಲವೂ ಬರೀ ಮೈಯ ಸರದಾರನೇ, ಇಪ್ಪತ್ತನೇ ಪ್ರಾಯದಲ್ಲಿ ಅವಳೇನಳ್ಳಿ ಗೌಡನ ಮನೆಯಲ್ಲಿ ಬರೀ ಮುದ್ದಿಗಾಗಿ ಸಂಬಳಕ್ಕಿದ್ದಾಗ,ಅಲ್ಲಿ ಕೂಲಿಗೆ ಬರ್ತಿದ್ದ ಸೂರವ್ವನ್ನ ಮೆಚ್ಸಿ ದೊಡ್ಳುಮಾರಮ್ಮನ ಗುಡಿಯಾಗೆ ಹರಿಶಿನದ ಕೊಂಬು ಕಟ್ಟಿದ್ನಂತೇ. ಆಗಾಗ ಕತೆ ಬಿಚ್ಕಂಡ್ರೆ ಇದ್ನೇಲ್ಲಾ ಸೂರವ್ನೇ ಹೇಳೋದು.
ಹೊತ್ತು ಕರಗಿ ಕತ್ತಲು ಗಟ್ಟಿಯಾಗತೊಡಗಿತ್ತು ಬೆಳಗಿಂದ್ಲೂ ಬಡಪ್ಪ ಮನೆ ಕಡೆನೇ ಬಂದಿಲ್ಲಾ? ಹೊಸ್ತಿಲಿಗೆ ನೀರಾಕಿ ಊದ್ಬತ್ತಿ ಹಚ್ಚಿ ಬುಡ್ಡಿಗೆ ಸೀಮೆಣ್ಣೆ ಸುರಿದು ಬೆಳಕು ಮೂಡಿಸಿದ ಸೂರವ್ವೆ ಮನೆ ಬಿಟ್ಟು ಸರಸರನೇ ನಡೆಯತೊಡಗಿದಳು ಆ ಗುಡ್ಡಗಳ ಮಧ್ಯೆಯ ಹಳ್ಳದ ಕಡೆಗೆ.
ಕಾಲ್ದಾರಿಯ ದೂರದ ಇಳಿಜಾರು, ಬಿಕೋ ಅನ್ನೋ ಬಯಲ ಬೆಂಗಾಡು, ಬೀಸೋ ಸುಳಿಗಾಳಿಗೆ ಧೂಳೂ ಹಡರಿ, ಗೂಡು ಸೇರುತ್ತಿದ್ದ ಹಕ್ಕಿಗಳು, ಹಟ್ಟಿ ಕಡೆ ಮುಖ ಮಾಡಿದ್ದ ದನಕರುಗಳು, ರೊಪ್ಪದಲ್ಲಿ ಕುರಿ ಕಂಡು ಹಾಲಿಗರುಸೋ ಕುರಿಮರಿಗಳ ಅರಚೋ ಸೆಲೆಗೇ ಹಟ್ಟಿ ನಾಯಿಗಳ ಬೋ ಅನ್ನೋ ಬೊಗ್ಳೋ ಸದ್ದೂ, ದೂರದಿಂದ್ಲೂ ಜೋರಾದ ಹೆಜ್ಜೆಗಳಿಗೆ ಸಣ್ಣಗೆ ಕೇಳಿ ಬರುತ್ತಿತ್ತು.
ಮಸುಕು ಮಸುಕಾದ ಕತ್ತಲಲ್ಲಿ ಗುಡ್ಡದ ತಪ್ಲಿಗೆ ಸೂರವ್ವ ಒಬ್ಬಳೇ. ದೂರದಲ್ಲಿ ಒಂಟಿಯಾಗಿ ಅವನೂ ಒಬ್ಬನೇ! ದಣಿವರಿಯದ ಕೆಲಸದಲ್ಲೀ. ಪಿಕಾಸಿಯಿಂದ ಬಗ್ದು, ಕಲ್ಲು ಪೊಟ್ರೆಗಳ ಸುತ್ಲೂ ಮಣ್ಣು ಸಡ್ಲಿಸಿ,ಸನ್ನೆಯಲ್ಲೇ ಹಾರೆಯಿಂದ ಮೀಟಿ,ಹಳ್ಳಕ್ಕೆ ಅಡ್ಡವಾಗಿ ಬಲವಾದ ಬಂಡೆಗಳನ್ನು ಉರುಳಿಸ್ತಾ,ಕೈಗೆಟುಕುವ ಕಾಡ್ಗಲ್ಲುಗಳ್ನ ಹೊತ್ತು ಎಸೆಯುತ್ತಾ,ಸಲಿಕೆಯಿಂದ ಮಣ್ಣನ್ನ ಪುಟ್ಟಿಗೆ ತುಂಬಿ ಮಧ್ಯಕ್ಕೆ ಸುರಿಯುತ್ತಿದ್ದಾನೆ. ಇವನೇನು ಮನುಷ್ಯನೋ!! ರಾಕ್ಷಸನೋ, ಕಂಚೋಬಳಸ್ವಾಮಿ! ಇವನಿಗೇನಾಗಿದೆ? ಏನಾದ್ರೂ ಆದ್ರೇ ನನಿಗ್ಯಾರು ದಿಕ್ಕು, ಮನಸ್ಸಿನ ದುಗುಡಕ್ಕೆ ಕಣ್ಣೀರು ಬಂದಂತಾಗಿ ಸೂರವ್ವೆ ಸೆರಗಿಂದ ಒರೆಸಿಕೊಳ್ಳುತ್ತಾ,ಹೆಜ್ಜೆಗಳು ಹತ್ತಿರವಾಗಿ ಕೂಗತೊಡಗಿದಳು.
ಮೈಮರೆತು ಕೆಲಸದಲ್ಲಿ ತೊಡಗಿದ್ದ ಬಡಪ್ಪ ಎಚ್ಚೆತ್ತು ಸುತ್ಲೂ ನೋಡಿದ. ಆಗ್ಲೇ ಕತ್ಲಾಗಿದೆ,ತುಸು ದೂರದಲ್ಲಿ ಹೆಂಡ್ರು ಕೂಗುತ್ತಿದ್ದುದೂ ಕೇಳಿಸ್ತಿತ್ತು. ದೂರದಿಂದಲೇ ಕೈಬೀಸಿ ಬಂದೇ ಅನ್ನುತ್ತಾ, ಬೆಳ್ಗಿನಿಂದ್ಲೂ ಪಟ್ಟ ಶ್ರಮಕ್ಕೊಮ್ಮೆ ಕಣ್ಣಾಯ್ಸಿದ, ನಿರಾಳತೆಯ ತೃಪ್ತಿ ಮನಸ್ಸಿಗೆ, ಇಷ್ಟು ದಿನದ ಬದುಕಿನಲ್ಲಿ ಎಂದೂ ಸಿಗದಂತಹ ಮಹಾ ತೃಪ್ತಿ ಅದು, ಹಾರೆ ಹೆಗಲಿಗೇರಿಸಿ ಸಲಿಕೆ ಪಿಕಾಸಿಯನ್ನ ನೇತಾಕಿಕೊಂಡವ್ನೇ ಪುಟ್ಟಿ ಹಿಡಿದು ಮೇಲೇರತೊಡಗಿದ ಸೂರವ್ವೆಯ ಕಡೆ. ಗಂಡ ಹಳ್ಳದಿಂದ ಮೇಲೇರಿ ಬರುತ್ತಿದ್ದುದ ಕಂಡು ಅಚ್ಚರಿಯೋ ಅಚ್ಚರಿ!
ಯುದ್ಧಕ್ಕೋಗಿ ಗೆದ್ದು ಬಂದ ಯೋಧನ ರೀತಿಯಲ್ಲಿ! ಅದೇ ಗಾಂಭೀರ್ಯ, ಎಂಥದ್ದಾದ್ರೂ ಜೈಸುತ್ತೇನೆನ್ನುವ ಛಲದಂಕ, ಕೂಲಿ ಮುಗಿಸಿ ಮನೆಗೆ ಬಂದಾಗಾ,ಇಂತಹ ಉಲ್ಲಾಸವನ್ನ ಒಮ್ಮೆಯೂ ಕಾಣದವಳು, ಅಂತಹ ಸಾಧನೆಯ ಬಿಗುಮಾನ, ಎರಡೂ ಕಣ್ಗಳು ಸಾಲದಾದವು ಸೂರವ್ವೆಗೆ. ನಗು ತುಂಬಿದ ಮಂದಹಾಸದ ಯೋಧ! ಗಟ್ಟಿ ಬದುಕಿಗೆ ಮೈಯೆಲ್ಲಾ ಹಣ್ಣಾಗಿದ್ರು, ಬೆವರಿಗೆ ಧೂಳು ಮಣ್ಣು ತಗಲಿ ಪ್ರಕೃತಿಯ ಜೊತೆ ಗುದ್ದಾಡಿದ, ಮಹಾ ಕುಸ್ತಿಪಟುವಿನಂತೇ
ಬೀಸುತ್ತಿರುವ ಗಾಳಿಯನ್ನೇ ಸೀಳಿ ಬರುತ್ತಿರುವ ಹಾಗೇ ಭಾಸವಾಯಿತು ಸೂರವ್ವೆಗೆ ಮತ್ತೇ ನಾಳೆಯ ಬದುಕು ಮೆಲುಕುತ್ತಾ ಹೆಜ್ಜೆಗಳು ಸರಿದಿದ್ದವು ಹಟ್ಟಿಯ ಕಡೆ ಅವ್ನ ಹಿಂದೆಯೇ ಗೆಲ್ವು ನಮ್ದೇ ಅನ್ನೋ ಭಾವದಲ್ಲಿ,ಸೂರವ್ವೆಯೂ ಕೂಡ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ.......


