ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳ ವಿರುದ್ಧ ಹಿರಿಯೂರು ನಗರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅಳವಡಿಸಲಾಗಿರುವ ಎಲ್ಲಾ ರೀತಿಯ ಪ್ರಚಾರ ಸಾಮಗ್ರಿಗಳನ್ನು 7 ದಿನದೊಳಗಾಗಿ ತೆರವುಗೊಳಿಸುವಂತೆ ಪೌರಾಯುಕ್ತ ಎ.ವಾಸೀಂ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಜವಾಬ್ದಾರಿ ನಿಮ್ಮದೇ: ಗಾಳಿ-ಮಳೆಯಿಂದಾಗಿ ಬ್ಯಾನರ್‌ಗಳು ಬಿದ್ದು ವಾಹನ ಸವಾರರಿಗೆ ಅಥವಾ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸಿದಲ್ಲಿ, ಅದಕ್ಕೆ ಸಂಬಂಧಪಟ್ಟ ಕಟ್ಟಡ ಮಾಲೀಕರು ಮತ್ತು ಬ್ಯಾನರ್ ಅಳವಡಿಸಿದವರೇ ನೇರ ಜವಾಬ್ದಾರರಾಗಿರುತ್ತಾರೆ. ನಗರಸಭೆಗೂ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ.
ನಿಯಮಾನುಸಾರ ಅನುಮತಿ ಕಡ್ಡಾಯ: ಇನ್ನು ಮುಂದೆ ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ಅಳವಡಿಸುವ ಮುನ್ನ ನಗರಸಭೆಯಿಂದ ಕಡ್ಡಾಯವಾಗಿ ಸ್ಥಳದ ಅನುಮತಿ ಪಡೆಯಬೇಕು ಮತ್ತು ನಿಗದಿತ ಶುಲ್ಕವನ್ನು ಪಾವತಿಸಬೇಕು.
ಕಾನೂನು ಕ್ರಮ: ಈ ಆದೇಶವು Prevention of Disfigurement Act 1981 ಮತ್ತು 2026ರ ಕರ್ನಾಟಕ ಅಧಿನಿಯಮದ ಸುತ್ತೋಲೆಗಳ ಅನ್ವಯ ಜಾರಿಯಲ್ಲಿದೆ. ಸೂಚನೆ ಮೀರಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಎ.ವಾಸೀಂ ಎಚ್ಚರಿಸಿದ್ದಾರೆ.
ತಪ್ಪಿದಲ್ಲಿ ದಂಡದ ಬಿಸಿ:
ಒಂದು ವೇಳೆ ಏಳು ದಿನಗಳ ಒಳಗೆ ಮಾಲೀಕರು ತಾವಾಗಿಯೇ ಬ್ಯಾನರ್‌ಗಳನ್ನು ತೆರವುಗೊಳಿಸದಿದ್ದರೆ, ನಗರಸಭೆಯೇ ಅವುಗಳನ್ನು ತೆರವುಗೊಳಿಸಲಿದೆ. ಈ ತೆರವು ಕಾರ್ಯಾಚರಣೆಯ ವೆಚ್ಚ ಮತ್ತು ಬಾಕಿ ಇರುವ ದಂಡದ ಮೊತ್ತವನ್ನು ಕಟ್ಟಡ ಮಾಲೀಕರಿಂದಲೇ ಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಪೌರಾಯುಕ್ತ ಎ.ವಾಸೀಂ ಎಚ್ಚರಿಸಿದ್ದಾರೆ.
ನಗರದ ಸುಗಮ ಸಂಚಾರ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಈ ನಿಯಮವನ್ನು ಪಾಲಿಸಬೇಕೆಂದು ನಗರಸಭೆ ಮನವಿ ಮಾಡಿದೆ.


