ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷ ಹಾಗೂ ಉಪನ್ಯಾಸಕ ಯೋಗೀಶ್ ಸಹ್ಯಾದ್ರಿ ಅವರು ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ವತಿಯಿಂದ ಕೊಡಮಾಡುವ “ವರ್ಷದ ಅತ್ಯುತ್ತಮ ಶಿಕ್ಷಕ” ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ರೊ. ಮಂಜುನಾಥ್ ಭಾಗವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಗೀಶ್ ಸಹ್ಯಾದ್ರಿ ಅವರು ವೃತ್ತಿಯಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕರಾಗಿದ್ದು, ರಾಜ್ಯದ ಪ್ರತಿಷ್ಠಿತ ಮೂಡಬಿದಿರೆಯ ಆಳ್ವಾಸ್ ಕಾಲೇಜು, ಸೈಂಟ್ ಅಲೋಶಿಯಸ್ ಕಾಲೇಜು ಹಾಗೂ ಚಿತ್ರದುರ್ಗ ಸೇರಿ ಅನೇಕ ಪಿಯು ಕಾಲೇಜುಗಳಲ್ಲಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಉಪನ್ಯಾಸಕರು, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆ-ಕಾಲೇಜುಗಳು, ಸ್ಲಂ ಪ್ರದೇಶದ ಹಾಗೂ ಹಾಸ್ಟೆಲ್ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸಿಕೊಡುತ್ತಿದ್ದು, ಇವರ ಕಾರ್ಯವನ್ನು ಗುರುತಿಸಿ ಸುವರ್ಣ Big 3 ಹೀರೋ, ಪಬ್ಲಿಕ್ ಟೀವಿ, ಟಿ.ವಿ9, BTV ಭರವಸೆಯ ಬೆಳಕು, ಹೀಗೆ ಅನೇಕ ಕನ್ನಡ ಟೀವಿ ಚಾನಲ್ ಗಳು ಹಾಗೂ ಪತ್ರಿಕೆಗಳು ಪ್ರೋತ್ಸಾಹಿಸಿರುವುದು ಗಮನಾರ್ಹ.
ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು “ಕಣ್ಣು ಕವನದ ಮುನ್ನುಡಿ”, “ದ ಹಿಲ್ಸ್ ಅಲೈವ್” ಮತ್ತು “ಅಡ್ವಾನ್ಸ್ಡ್ ಇಂಗ್ಲಿಷ್ ಗ್ರಾಮರ್” ಎಂಬ 3 ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸುಮಾರು 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಿದ್ದಾರೆ.
ಯೋಗೀಶ್ ಸಹ್ಯಾದ್ರಿ ಅವರ ಸಾಧನೆ ಹಾಗೂ ಸಾಮಾಜಿಕ, ಶೈಕ್ಷಣಿಕ ಕೊಡುಗೆಯನ್ನು ಗುರುತಿಸಿ ಶಿಕ್ಷಕರ ದಿನಾಚರಣೆ – 2024 ರ ಪ್ರಯುಕ್ತ ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ವತಿಯಿಂದ ದಿನಾಂಕ : 13-09-2024 ರಂದು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.