ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳಿಗೆ ಸಂಪೂರ್ಣ ರಕ್ಷಣೆ ಮತ್ತು 'ಫ್ರೀ ಹ್ಯಾಂಡ್' ನೀಡಲಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೊನ್ನೆ ಪುತ್ತೂರಿನಲ್ಲಿ ಹಾಗೂ ಇತ್ತೀಚೆಗೆ ಬೆಂಗಳೂರಿನ ಬಸವನಗುಡಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ನಡೆದಿದೆ ಎನ್ನಲಾದ ದಾಳಿಯನ್ನು ಖಂಡಿಸಿರುವ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಾಂಧರಿಗೆ ಕಾನೂನಿನ ಭಯವಿಲ್ಲ: "ಹಿಂದೂಗಳ ಧಾರ್ಮಿಕ ಆಚರಣೆಗಳು ಹಾಗೂ ಗಣೇಶ ಉತ್ಸವದ ಮೆರವಣಿಗೆಗಳ ಮೇಲೆ ನಡೆದ ದಾಳಿಗಳನ್ನು ಜನರು ಇನ್ನು ಮರೆತಿಲ್ಲ. ಹೀಗಿರುವಾಗ ಈದ್ ಮಿಲಾದ್ ಮೆರವಣಿಗೆಯ ವೇಳೆಯೂ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆದಿರುವುದು ಆತಂಕಕಾರಿ. ಪುತ್ತೂರಿನಲ್ಲಿ ಪೊಲೀಸರ ಸಮ್ಮುಖದಲ್ಲೇ ದಾಳಿ ನಡೆಸಿದ್ದ ದುಷ್ಕರ್ಮಿಗಳು, ಅದೇ ಪ್ರವೃತ್ತಿಯನ್ನು ಬೆಂಗಳೂರಿನಲ್ಲೂ ಮುಂದುವರಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಗೃಹ ಸಚಿವರ ವಿರುದ್ಧ ಕಿಡಿ: ಮತಾಂಧರು ಹೀಗೆ ಸಾರ್ವಜನಿಕವಾಗಿ ಕಾನೂನು ಕೈಗೆತ್ತಿಕೊಳ್ಳುತ್ತಿರುವುದನ್ನು ನೋಡಿದರೆ, ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಸವಾಲೆಸೆದಿದ್ದಾರೆ.
ತುಷ್ಟೀಕರಣವೇ ಮೂಲ ಕಾರಣ: ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯೇ ಮತಾಂಧರು ಕಾನೂನು ಕೈಗೆತ್ತಿಕೊಳ್ಳಲು ಮುಖ್ಯ ಕಾರಣ. ಚುನಾವಣಾ ಲಾಭಕ್ಕಾಗಿ ಮತಾಂಧರನ್ನು ಓಲೈಸಲು ಹೋಗಿ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡವುತ್ತಿದೆ ಎಂದು ಟೀಕಿಸಿದ್ದಾರೆ.
ತಕ್ಷಣ ಬಂಧನಕ್ಕೆ ಆಗ್ರಹ: ಬಸವನಗುಡಿ ಹಾಗೂ ಪುತ್ತೂರು ಘಟನೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದ ನೆಮ್ಮದಿ ಕೆಡಿಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.




