ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಕಣಜನಹಳ್ಳಿ ಸಮೀಪ ಕಳೆದ ಹಲವು ದಿನಗಳಿಂದ ಸತತವಾಗಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭೀತಿ ಸೃಷ್ಟಿಸಿದ್ದ ಕರಡಿಯನ್ನು ಕೊನೆಗೂ ಬಲೆಗೆ ಕೆಡವಲು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಡಿ ಓಡಾಟ ಹೆಚ್ಚಾಗಿದ್ದು, ರಸ್ತೆ ಹಾಗೂ ತೋಟಗಳಿಗೆ ತೆರಳಲು ಜನಸಾಮಾನ್ಯರು ಮತ್ತು ರೈತರು ಭಯಪಡುವಂತಾಗಿತ್ತು. ಸಾರ್ವಜನಿಕರ ದೂರಿನನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ, ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಕರಡಿಯನ್ನು ಸುರಕ್ಷಿತವಾಗಿ ಬಂಧಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಸ್. ಬಾಬು ಹಾಗೂ ಉಪವಲಯ ಅರಣ್ಯಾಧಿಕಾರಿ ವಸಂತ್ ಅವರ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಯಶವಂತ್, ಕಿರಣ್, ಅಂಜಿನಪ್ಪ, ಪ್ರಮೋದ್, ದರ್ಶನ್, ಕೆಂಚಪ್ಪ, ಹಾಗೂ ಮಹಾಂತೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕರಡಿಯನ್ನು ಸೆರೆಹಿಡಿದ ಹಿನ್ನೆಲೆಯಲ್ಲಿ ಕಣಜನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.




